ದಸರಾ ಜಂಬೂಸವಾರಿಗೆ ಸಿದ್ದತೆ ಪೂರ್ಣ: ಮುಸ್ಸಂಜೆ ವಿದ್ಯುತ್ ಬೆಳಕಿನಲ್ಲಿ ಸಾಗಲಿದೆ ಚಿನ್ನದ ಅಂಬಾರಿ ಹೊತ್ತ ಗಜಪಡೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಸಿದ್ದತೆ ಪೂರ್ಣಗೊಂಡಿದ್ದು,ಕ್ಷಣಗಣನೆ ಪ್ರಾರಂಭವಾಗಿದೆ.
ನಗರದ ಹೃದಯಭಾಗ ಮಧುವಣಗಿತ್ತಿಯಂತೆ ಶೃಂಗಾರ ಗೊಂಡಿದೆ.ಎಲ್ಲೆಲ್ಲೂ ಸಡಗರ,ಸಂಭ್ರಮ ಮನೆ ಮಾಡಿದೆ.
ಈ ಬಾರಿ ವಿಶೇಷವೆಂದರೆ ಜಂಬೂ ಸವಾರಿ ಮೆರವಣಿಗೆ ಮುಸ್ಸಂಜೆಯ ದೀಪದ ಬೆಳಕಿನಲ್ಲಿ ನಡೆಯುತ್ತಿರುವುದು.
ಜನತೆ ಈ‌ ವಿಶೇಷತೆಯನ್ನು ಸಂಜೆಯ ದಸರಾ  ವಿದ್ಯುತ್ ದೀಪದ ಬೆಳಕಿನಲ್ಲಿ ವೀಕ್ಷಿಸಬಹುದಾಗಿದೆ.
ಅರಮನೆ ಆವರಣ ಹಾಗೂ ಮುಂಭಾಗ,ರಸ್ತೆಯ ಪಾದಚಾರಿ ಭಾಗದಲ್ಲಿ ಮೆರವಣಿಗೆ ವೀಕ್ಷಿಸಲು ಆಸನಗಳನ್ನು ಸಿದ್ದಪಡಿಸಲಾಗಿದೆ.
ಜಂಬೂಸವಾರಿ ಸಾಗುವ ರಸ್ತೆಯುದ್ದಕ್ಕೂ ಜನರಿಗೆ ತೊಂದರೆಯಾಗದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ.
ನಗರದ ಒಂದೊಂದು ರಸ್ತೆಯೂ ಬಣ್ಣ,ಬಣ್ಣದ ಅಲಂಕಾರಿಕ ವಿದ್ಯುತ್ ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಮಧ್ಯಾಹ್ನ ೨.೩೬ರಿಂದ ೨.೫೦ರರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.‌ ಟಿ. ಸೋಮಶೇಖರ್‌ ರೊಂದಿಗೆ ನಂದೀಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ನಂತರ ಸಂಜೆ ೫.೦೭ರಿಂದ ೫.೧೮ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆ ಆವರಣದಲ್ಲಿ ಸರ್ವಾಲಂಕಾರ ಭೂಷಿತಳಾದ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಬೊಮ್ಮಾಯಿ ಪುಷ್ಪಾರ್ಚನೆ ಮಾಡಲಿದ್ದಾರೆ.
ಈ ಮೂಲಕ ವಿಜಯ ದಶಮಿ ಮೆರವಣಿಗೆಗೆ ವಿದ್ಯುಕ್ತ ಚಾಲನೆ ದೊರೆಯಲಿದೆ.
ಆನಂತರ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಗಜಪಡೆಯ ಕ್ಯಾಪ್ಟನ್‌ ಅಭಿಮನ್ಯು ಹೊತ್ತು ಸಾಗಲಿದ್ದಾನೆ. ಆ ಕ್ಷಣಕ್ಕಾಗಿ ಲಕ್ಷಾಂತರ ಜನ ಕಾತುರದಿಂದ ಕಾಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಗಳೊಂದಿಗೆ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಸಚಿವ ಎಸ್.‌ ಟಿ. ಸೋಮಶೇಖರ್‌, ಮೇಯರ್‌ ಶಿವಕುಮಾರ್‌, ಸಚಿವ ಸುನೀಲ್‌ ಕುಮಾರ್‌ ಹಾಗೂ ಶಾಸಕ ಎಸ್.‌ ಎ .ರಾಮದಾಸ್‌ ಉಪಸ್ಥಿತರಿರುವರು.
ಈ ಬಾರಿಯ ದಸರಾ ಮೆರವಣಿಗೆಯಲ್ಲಿ ೪೩ ಸ್ತಬ್ಧಚಿತ್ರಗಳು ನಾಡಿನ ಕಲೆ,ಸಾಹಿತ್ಯವನ್ನು ಬಿಂಬಿಸಲಿವೆ. 
ಇದರೊಂದಿಗೆ ಪೊಲೀಸ್‌ ಬ್ಯಾಂಡ್‌, ಅಶ್ವಾರೋಹಿ ಪಡೆ, ಕುಮ್ಕಿ ಆನೆಗಳು, ನಾದಸ್ವರ, ನಂದಿಧ್ವಜ, ಪಟದ ಕುಣಿತ ಸಹಿತ ಜಾನಪದ ಕಲಾ ತಂಡಗಳು ಸೇರಿದಂತೆ ೧೦೦ಕ್ಕು ಹೆಚ್ಚು ಕಲಾ ತಂಡಗಳು ಜಂಬೂಸವಾರಿ ಮೆರವಣಿಗೆಯಲ್ಲಿ ನೋಡುಗರ ಮನಸೂರೆಗೊಳ್ಳಲಿವೆ.
ಮೆರಣಿಗೆ ಅರಮನೆಯಿಂದ ಬನ್ನಿಮಂಟಪ ತಲುಪಲು ಸಂಜೆ ೭ ಗಂಟೆ ಆಗಲಿದೆ. ಈ ಬಾರಿ ಹಿಂದಿಗಿಂತಲೂ ಹೆಚ್ಚು ವಿದ್ಯುತ್ ದೀಪಾಲಂಕಾರ ಮಾಡಿರುವುದರಿಂದ ಜಂಬೂಸವಾರಿ ಮೆರವಣಿಗೆ ಇನ್ನೂ ಅಧಿಕ ಕಳೆಗಟ್ಟಲಿದೆ.
ಪಂಜಿನ ಕವಾಯತು: ಜಂಬೂ ಸವಾರಿ ಮೆರವಣಿಗೆ ಬನ್ನಿಮಂಟಪ ತಲುಪಿದ ನಂತರ ೭.೩೦ಕ್ಕೆ ಪಂಜಿನ ಕವಾಯತು ಆರಂಭವಾಗಲಿದೆ.
ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. 
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ನಿರ್ಮಲಾಸೀತಾರಾಮನ್‌, ಪ್ರಹ್ಲಾದ್‌ ಜೋಷಿ, ರಾಜೀವ್‌ ಚಂದ್ರಶೇಖರ್‌, ಶೋಭಾ ಕರಂದ್ಲಾಜೆ ಹಾಗೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರ
ಪಂಜಿನ ಕವಾಯಿ ನಂತರ ದಸರಾ ಹಬ್ಬ ಸಂಪನ್ನವಾಗಲಿದೆ.
ಈ ಬಾರಿಯ ದಸರಾಕ್ಕೆ ೧೫ ಲಕ್ಷ ಜನ ಬರುವ ನೀರಿಕ್ಷೆ ಇದೆ.
ದಸರಾ ಮೆರವಣಿಗೆಗಾಗಿಯೇ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ೩೨೫೦ ಮಂದಿ ಹೆಚ್ಚುವರಿ ಪೊಲೀಸ್‌ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮೆರವಣಿಗೆಯುದ್ದಕ್ಕೂ ದ್ರೋಣ್‌ ಕ್ಯಾಮಾರ ಕಣ್ಗಾವಲು ಇರಲಿದೆ.ಒಂದು ವೇಳೆ ಏನೇ ಅಹಿತಕರ ಘಟನೆ ನಡೆದರೂ ದ್ರೋಣ್ ಸೆರೆ ಹಿಡಿಯಲಿದೆ. ಈ ಮೂಲಕವೂ ಕಟ್ಟೆಚ್ಚರ ವಹಿಸಲಿದ್ದಾರೆ ಪೊಲೀಸರು.