ಮೈಸೂರು: ನಾಡಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವು ಬುಧವಾರ ವಿಜೃಂಭಣೆಯಿಂದ ನೆರವೇರಿದ್ದು ಸಮಯ ಸಂಜೆ 5:37ಕ್ಕೆ ಸರಿಯಾಗಿ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸೇರಿದಂತೆ ಗಣ್ಯರಿಂದ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.
ಪುಷ್ಪಾರ್ಚನೆ ಸಂದರ್ಭ ರಾಷ್ಟ್ರಗೀತೆ ನುಡಿಸುವ ಮೂಲಕ ತಾಯಿ ಚಾಮುಂಡೇಶ್ವರಿಗೆ ಗೌರವ ಸೂಚಿಸಲಾಯಿತು.
ನಗರದ ಅರಮನೆ ಆವರಣದಲ್ಲಿ 750ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ನಾಡದೇವಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ತನ್ನ ಗಜ ಗಾಂಭೀರ್ಯದಿಂದ ಕುಮ್ಕಿ ಆನೆಗಳಾದ ಚೈತ್ರ ಮತ್ತು ಕಾವೇರಿಯೊಂದಿಗೆ ಹೆಜ್ಜೆ ಹಾಕಿತು.
ಇದಕ್ಕೂ ಮುನ್ನ ಮೌಂಟೆಡ್ ಕೆ.ಆರ್.ಪಿ ಕಮಾಂಡೆಂಟ್ ಅವರಾದ ಎಂ.ಜಿ ನಾಗರಾಜ ಮತ್ತು ಎಸ್.ಡಿ.ಸಾಸನೂರು ಅವರ ನೇತೃತ್ವದಲ್ಲಿ 8 ತುಕಡಿಗಳಾದ 2 ಕೆ.ಎಸ್.ಆರ್.ಪಿ, 1 ಸಿ.ಎ.ಆರ್, 1 ಡಿ.ಎ.ಆರ್, 1 ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಹಾಗೂ 1 ಗೃಹದಳದ ಮುಂದಾಳತ್ವದಲ್ಲಿ ಕ್ಯಾಪ್ಟನ್ ಅಭಿಮನ್ಯು ನಾಡದೇವಿ ಉತ್ಸವ ಮೂರ್ತಿಯನ್ನು ಹೊತ್ತು ರಾಜಬೀದಿಗಳಲ್ಲಿ ಸಾಗಿತು.
ಪುಷ್ಪಾರ್ಚನೆ ಸಲ್ಲಿಸುವ ವೇಳೆ ಮಹಾರಾಜ ಯದುವೀರ್ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರ್, ಇಂಧನ ಸಚಿವರಾದ ವಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಮತ್ತು ದಸರಾ ವಿಶೇಷಾಧಿಕಾರಿಯವರಾದ ಡಾ.ಬಗಾದಿ ಗೌತಮ್, ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತ ಅವರು ಪಾಲ್ಗೊಂಡಿದ್ದರು.

