ಬೆಂಗಳೂರು/ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು, ನವೆಂಬರ್ 1ರಿಂದ ಆರಂಭವಾಗಲಿರುವ ಪಂಚರತ್ನ ರಥಯಾತ್ರೆ, ಪಕ್ಷ ಸಂಘಟನೆ ಸೇರಿದಂತೆ ಇತ್ಯಾದಿ ಪ್ರಮುಖ ಅಂಶಗಳ ಅಜೆಂಡಾ ಇಟ್ಟುಕೊಂಡು ಜಾತ್ಯತೀತ ಜನತಾದಳ ಪಕ್ಷವು ಮೈಸೂರಿನಲ್ಲಿ ಎರಡು ದಿನಗಳ (ಅಕ್ಟೋಬರ್ 19 & 20) ಸಮಾಲೋಚನಾ ಸಭೆಯನ್ನು ಹಮ್ಮಿಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಎರಡು ದಿನಗಳ ಈ ಕಾರ್ಯಾಗಾರ ಪಕ್ಷದ ಸಂಘಟನೆ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ನಮ್ಮ ಪಕ್ಷದ ನಾಯಕರಿಗೆ ಮುಂದಿನ ಕಾರ್ಯತಂತ್ರದ ಬಗ್ಗೆ ಸ್ಪಷ್ಟ ದಿಕ್ಸೂಚಿ ನೀಡಲಾಗುವುದು ಎಂದಿದ್ದಾರೆ.
ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಹಾಗೆಯೇ; ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಷೆಂಪೂರ್, ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮುಂಬರುವ ವಿಧಾನಸಭೆ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳು, ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರು ಸೇರಿದಂತೆ ಆಯ್ದ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಪಂಚರತ್ನ ರಥಯಾತ್ರೆ: ನವೆಂಬರ್ 1ರಿಂದ ಪಂಚರತ್ನ ರಥಯಾತ್ರೆ ಅರಂಭವಾಗುತ್ತಿದ್ದು, ಯಾತ್ರೆಯ ಅಂತಿಮ ಹಂತದ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಲ್ಲದೆ, ರಥಯಾತ್ರೆ ಹೇಗಿರುತ್ತದೆ? ಅದರ ಸ್ವರೂಪವೇನು? ಯಾವ ಮಾರ್ಗದಲ್ಲಿ ಸಾಗುತ್ತದೆ? ಗ್ರಾಮ ವಾಸ್ತವ್ಯ, ಜನ ಸಂಪರ್ಕ ಸಭೆ, ಸಮಾವೇಶ ಇತ್ಯಾದಿ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಅಭ್ಯರ್ಥಿಗಳಿಗೆ ಚುನಾವಣೆ ಪಾಠ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅನುಸರಿಸಬಹುದಾದ ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ ಎಂದಿರುವ ಮಾಜಿ ಮುಖ್ಯಮಂತ್ರಿಗಳು, ಪ್ರತಿ ಕ್ಷೇತ್ರವೂ ನಮಗೆ ಮುಖ್ಯವಾಗಿದೆ ಎಂದಿದ್ದಾರೆ.
ಬಿಡದಿಯಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿಗಳಿಗೆ ಕೆಲ ಟಾಸ್ಕುಗಳನ್ನು ಕೊಡಲಾಗಿತ್ತು. ಕೆಲವರು ಆ ಟಾಸ್ಕುಗಳನ್ನು ಅತ್ಯುತ್ತಮವಾಗಿ ಪೂರ್ಣಗೊಳಿಸಿದ್ದಾರೆ. ಕೆಲವರು ಪ್ರಾಮಾಣಿಕವಾಗಿ ಪೂರ್ಣಗೊಳಿಸಲು ಯತ್ನಿಸಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಕೂಲಂಕಷವಾಗಿ ಗಮನಿಸಿ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

