ಮೈಸೂರು: ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ಭೇಟಿ ಮಾಡಿದ್ದು ನಿಜ, ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಮೀರ್, ನಾನು ತೆಲಂಗಾಣ ಸಿಎಂ ಭೇಟಿ ಮಾಡಿದ್ದು ಸತ್ಯ. ಆದರೆ 500 ಕೋಟಿ ಆಫರ್ ಬಗ್ಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಹೈದರಾಬಾದ್ಗೆ ಹೋಗಿದ್ದುದು ನಿಜ, ಕೆಸಿಆರ್ ಭೇಟಿ ಮಾಡಿದ್ದೂ ನಿಜ, ನಮ್ಮ ಭೇಟಿಯಲ್ಲಿ ರಾಜಕೀಯ ಚರ್ಚೆ ಆಗಿಲ್ಲ ಎಂದು ಜಮೀರ್ ತಿಳಿಸಿದರು.
ತಾಂಡೂರು ಶಾಸಕ ರೋಹಿತ್ ರೆಡ್ಡಿ ನನ್ನ ಸ್ನೇಹಿತ. ಅವರು ಸಿಎಂ ಚಂದ್ರಶೇಖರ್ ಭೇಟಿ ಮಾಡಿ ಎಂದು ಕೇಳಿಕೊಂಡರು,ಹಾಗಾಗಿ ಭೇಟಿ ಮಾಡಿದ್ದೆ, ಅವರೇ ಬೇರೆ ಪಕ್ಷ, ನಾವೇ ಬೇರೆ ಪಕ್ಷ ಅಲ್ಲವಾ ಎಂದರು.
ನನ್ನ ಬಗ್ಗೆ ಯಾರು ಏನು ಹೇಳಿದ್ದಾರೋ ಅವರನ್ನ ಕೇಳಿ ಎಂದು ತಿಳಿಸಿದರು.
ಬಹಳ ಜನ ಕೆಸಿಆರ್ ಭೇಟಿ ಮಾಡಿದ್ದಾರೆ. ಅದು ಪ್ರಚಾರ ಆಗಿಲ್ಲ, ನನ್ನದು ಮಾತ್ರವೇ ಪ್ರಚಾರ ಆಗಿದೆ. ಮಾಧ್ಯಮಗಳು ನನ್ನ ವಿಚಾರ ಅಂದರೆ ಜಾಸ್ತಿ ಪ್ರಚಾರ ಮಾಡ್ತಾರೆ ಎಂದರು ಜಮೀರ್.

