ಮೈಸೂರು: ಮೈಸೂರಿನ ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಂಧ್ರ ಪ್ರದೇಶದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಅತಿರುದ್ರ ಯಾಗ ಆರಂಭಿಸಿದ್ದಾರೆ.
ಶ್ರೀಶೈಲದಲ್ಲಿರುವ ತೆಲುಗು ವಿಶ್ವವಿದ್ಯಾನಿಲಯದ ಮೈದಾನದಲ್ಲಿ ಜ. 17ರಂದು ಶ್ರೀಶೈಲದ ಜಗದ್ಗುರು ಶ್ರೀಚನ್ನಸಿದ್ದರಾಮ ಪಂಡಿತಾರಾಧ್ಯ ಮಹಾಸ್ವಾಮೀಜಿ ಅವರ ಅನುಗ್ರಹ ನುಡಿಗಳೊಂದಿಗೆ ಆರಂಭಗೊಂಡಿರುವ ಅತಿರುದ್ರ ಯಾಗ 11 ದಿನಗಳ ಕಾಲ ನಡೆಯಲಿದ್ದು ಜ.27ಕ್ಕೆ ಮುಕ್ತಾಯಗೊಳ್ಳಲಿದೆ.
ಶ್ರೀಗಣಪತಿ ಸಚ್ಚಿದಾನಂದಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀಶೈಲದಲ್ಲಿ ನಡೆಯುತ್ತಿರುವ ಮೊದಲ ಅತಿರುದ್ರಯಾಗ ಇದಾಗಿದ್ದು, ಈ ಹಿಂದೆ ಶ್ರೀಗಳ ಮಾರ್ಗದರ್ಶನದಲ್ಲಿ ವಾರಣಾಸಿ ಕ್ಷೇತ್ರದಲ್ಲಿ ನಡೆದಿತ್ತು.
ಇತ್ತೀಚೆಗಷ್ಟೆ ಮೈಸೂರಿನಲ್ಲಿ 80ನೇ ವರ್ಧಂತಿ ಆಚರಿಸಿಕೊಂಡಿದ್ದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು, ಇದೀಗ ಸಹಸ್ರ ಚಂದ್ರಮಾನ ದರ್ಶನವಾದ ಹಿನ್ನೆಲೆಯಲ್ಲಿ ತಮಗೆ ಗುರು ದೀಕ್ಷೆ ನೀಡಿದ ಶ್ರೀಶೈಲದಲ್ಲಿ ಅತಿರುದ್ರ ಯಾಗ ಮಾಡುತ್ತಿದ್ದಾರೆ.
ಈವರೆಗೆ ಶ್ರೀಗಳ ನೇತೃತ್ವದಲ್ಲಿ ನಾಲ್ಕು ಬಾರಿ ಅತಿರುದ್ರ ಯಾಗ ನಡೆದಿದ್ದು, ಇದರಲ್ಲಿ ಎರಡು ಬಾರಿ ಮೈಸೂರಿನ ಅವಧೂತ ದತ್ತ ಪೀಠದಲ್ಲಿ ನಡೆಸಿದ್ದರು.
ಮೌನಿ ಅಮಾವಾಸ್ಯೆಯಾದ ಶನಿವಾರ ನಡೆದ 5ನೇ ದಿನದ ಅತಿರುದ್ರ ಯಾಗದಲ್ಲಿ ಆಗಮ ಪಂಡಿತರ ವೇದೋದ್ಘೋಷದ ನಡುವೆ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಯಜ್ಞಕ್ಕೆ ಪೂರ್ಣಾಹುತಿ ನೀಡಿದರು.
ನಂತರ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಶ್ರೀಗಳು ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.
ಅತಿರುದ್ರ ಯಾಗದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರದ ಸಹಸ್ರಾರು ಭಕ್ತರು ಭಾಗವಹಿಸುತ್ತಿದ್ದು, ನಿತ್ಯ ಸಂಜೆ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಪ್ರಚವನ ನೀಡುತ್ತಿದ್ದಾರೆ.

