ಮೈಸೂರು: ಸಾಮಾನ್ಯವಾಗಿ ಹನುಮ ಜಯಂತಿಯನ್ನು ಒಂದೊಂದು ಪ್ರದೇಶದಲ್ಲಿ ಒಂದೊಂದು ದಿನಾಂಕದಲ್ಲಿ ಆಚರಿಸುತ್ತಾರೆ.ವರ್ಷದಲ್ಲಿ ಮೂರು ಬಾರಿ ಹನುಮ ಜಯಂತಿ ಆಚರಿಸಲಾಗುತ್ತದೆ.
ಮೈಸೂರಿನ ಶಾರದಾದೇವಿ ನಗರದಲ್ಲಿ ಹನುಮ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.
ಹನುಮ ಜಯಂತಿ ಉತ್ಸವ ಸಮಿತಿ ವತಿಯಿಂದ ಶ್ರೀಆಂಜನೇಯ ಸ್ವಾಮಿಯ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
101 ಪೂರ್ಣಕುಂಭ ಕಳಶ ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಉತ್ಸವ ವೈಭವಯುತವಾಗಿ ನಡೆಯಿತು.
ನಂದಿಕೋಲು ಕುಣಿತ, ಮಹಿಳಾ ವೀರಗಾಸೆ ಕುಣಿತ, ಪೂಜಾ ಕುಣಿತ, ತಮಟೆ ಸೇರಿದಂತೆ ಇನ್ನಿತರ ಕಲಾ ತಂಡಗಳ ಪ್ರದರ್ಶನ ಜನ ಮನ ಸೂರೆಗೊಂಡಿತು.
ಶಾರದಾದೇವಿ ನಗರ ವೃತ್ತದಿಂದ ಆರಂಭವಾದ ಮೆರವಣಿಗೆಗೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ. ಟಿ. ಪ್ರಕಾಶ್, ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ ಅಧ್ಯಕ್ಷ ಬಿ. ಎಂ. ರಘು ಹಾಗೂ ಕಾಂಗ್ರೆಸ್ ಯುವ ಮುಖಂಡ ಎನ್. ಎಂ. ನವೀನ್ ಕುಮಾರ್, ನಗರಪಾಲಿಕೆ ಸದಸ್ಯರಾದ ನಿರ್ಮಲ ಹರೀಶ್ ಮತ್ತಿತರರು ಆಂಜನೇಯ ಸ್ವಾಮಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ, ಲಗಾರಿ ಚಂಡೆ ಮದ್ದಳೆ ಜಾನಪದ ಕಲಾತಂಡಗಳ ಜೊತೆಗೆ ಹನುಮ ಭಕ್ತರು ತಂಡೋಪ ತಂಡವಾಗಿ ಹೆಜ್ಜೆ ಹಾಕುತ್ತಾ ಭಕ್ತಿ ಭಾವ ಮೆರೆದರು.
ವಿಶೇಷವಾಗಿ ಮಹಿಳಾ ಚಂಡೆ ಮದ್ದಳೆ ತಂಡದ ಜೊತೆಗೆ ತಾಳಕ್ಕೆ ಮಹಿಳಾ ಭಕ್ತರು ಮಕ್ಕಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು,
ರಾಮ ಹನುಮನ ಭಕ್ತಿಗೀತೆಗಳಿಗೆ ಸಾರ್ವಜನಿಕರು ಮನಸಾರೆ ಕುಣಿದು ಜೈಕಾರ ಕೂಗಿದರು
ಹೇಮಂತ್ ಕುಮಾರ್ ಗೌಡ, ಪ್ರದೀಪ್ ಕುಮಾರ್, ಎಚ್. ಜಿ. ರಾಜಮಣಿ,ಈರೇಗೌಡ, ರಾಕೇಶ್ ಭಟ್,ಸಂತೋಷ್, ಅಭಿಷೇಕ್, ಶಿವಕುಮಾರ್, ರಮಬಾಯಿ, ಗೀತಾ ಮಹೇಶ್ ಮತ್ತಿತರರು ಭಾಗವಹಿಸಿದ್ದರು.

