ಮೈಸೂರು: ಪದ್ಮಭೂಷಣ ಪ್ರಶಸ್ತಿ ನೀಡಿರುವುದಕ್ಕೆ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಾಹಿತಿ ಎಸ್.ಎಲ್. ಭೈರಪ್ಪ ತಿಳಿಸಿದರು.
ನಗರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನನಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಮೋದಿ ಸರ್ಕಾರವನ್ನು ನಾನು ಹೊಗಳುತ್ತಿಲ್ಲ. ಏಕೆಂದರೆ ನನಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.
ಮೋದಿ ಸರ್ಕಾರದಂತಹ ಸರ್ಕಾರವನ್ನು ಇದುವರೆಗೆ ನಾನು ಕಂಡಿರಲಿಲ್ಲ ಎಂದು ಇದೇ ವೇಳೆ ಬೈರಪ್ಪ ತಿಳಿಸಿದರು.
ಪದ್ಮಭೂಷಣ ಕೊಟ್ಟಿರುವುದು ಸಂತೋಷವಾಗಿದೆ. ಆದರೂ ನನ್ನ ಅನೇಕ ಪುಸ್ತಕಗಳನ್ನು ಓದಿ ಜನ ಸಂತೋಷಪಟ್ಟಿದ್ದಾರೆ ಅದು ಎಲ್ಲದಕ್ಕಿಂತ ಮಿಗಿಲಾದ ಅವಾರ್ಡ್ ಎಂದು ಹೇಳಿದರು.
ಈಗ ನನಗೆ 92 ವರ್ಷ, ನಾನು ಸತ್ತ ನಂತರವೂ ನನ್ನ ಪುಸ್ತಕ ಗಳ ಬಗ್ಗೆ ಅಷ್ಟೇ ಪ್ರೀತಿ ಇರುತ್ತದೆಯೇ ಎಂಬುದು ನನ್ನ ಪ್ರಶ್ನೆ.
ಕುಮಾರವ್ಯಾಸನ ಮಹಾಭಾರತ ಪುಸ್ತಕವನ್ನು ಪ್ರತಿ ಹಳ್ಳಿಗಳಲ್ಲಿಯೂ ಓದಿಸಿ ಹೇಳುತ್ತಾರೆ, ಆ ಪುಸ್ತಕದಲ್ಲಿ ಅಂತಹ ಶಕ್ತಿ ಇದೆ.ಅದೇ ರೀತಿ ನನ್ನ ಬರವಣಿಗೆಯಲ್ಲೂ ಆ ಶಕ್ತಿ ಇದೆಯೆ ಎಂದು ತಿಳಿದುಕೊಳ್ಳಲು ನಾನೂ ಇರಲ್ಲ,ನೀವೂ ಇರಲ್ಲ ಎಂದು ನಗೆಯಾಡಿದರು.

