ಸಂವಿಧಾನ ರಚಿಸಿದ ಅಂಬೇಡ್ಕರ್ ಸ್ಮರಣೆ ಮಾಡಿದ ಡಿಕೆಶಿ

ಮೈಸೂರು:  ನೆಹರೂ ಅವರ ಅಧ್ಯಕ್ಷತೆಯಲ್ಲಿ  ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಅವರ ದೂರದೃಷ್ಟಿ ಹಾಗೂ ಕೊಡುಗೆಯನ್ನು ನೆನಪಿಸಿಕೊಳ್ಳದಿದ್ದರೆ ಕರ್ತವ್ಯಲೋಪವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಗಣರಾಜ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ರಚಿಸಿದ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಸ್ಮರಿಸಿ, ಅಭಿನಂದನೆ ಸಲ್ಲಿಸಬೇಕು ಎಂದು ತಿಳಿಸಿದರು

ಇಂದು ನಾವೆಲ್ಲರೂ 74ನೇ ಗಣರಾಜ್ಯೋತ್ಸವ ದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷನಾಗಿ ಮೊದಲ ಬಾರಿಗೆ ಈ ಐತಿಹಾಸಿಕ ಭೂಮಿಯಲ್ಲಿ ರಾಷ್ಟ್ರಧ್ವಜ ಹಾರಿಸಿ ಈ ದಿನ ಆಚರಣೆ ಮಾಡುತ್ತಿದ್ದೇನೆ ಇದು ನನಗೆ ಹೆಮ್ಮೆ ಎಂದರು.

ಇಂದು ಭಾರತಕ್ಕೆ ಸಂವಿಧಾನ ಕೊಟ್ಟ ಪವಿತ್ರ ದಿನ ಕಾಂಗ್ರೆಸ್ ಈ ಪವಿತ್ರ ಗ್ರಂಥ ಕೊಟ್ಟು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಶಕ್ತಿ ತುಂಬಿದ ದಿನ. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ದಿನ ಎಂದು ಹೇಳಿದರು

ಸಂವಿಧಾನದ ತತ್ವ ಸಿದ್ಧಾಂತವೇ ಕಾಂಗ್ರೆಸ್ ನ ತತ್ವ ಸಿದ್ಧಾಂತ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ತಂದ ಸಾಂವಿಧಾನಿಕ ತಿದ್ದುಪಡಿಗಳು, ನೀತಿಗಳ ಮೂಲಕ ಈ ದೇಶ ಕಟ್ಟಲಾಗಿದೆ ಎಂದು ಡಿಕೆಶಿ ಹೇಳಿದರು.

ವಿಶ್ವದ ಅನೇಕ ರಾಷ್ಟ್ರಗಳು ನಮ್ಮ ಸಿದ್ಧಾಂತ, ಸಂವಿಧಾನದಿಂದ ಪ್ರೇರಣೆ ಪಡೆದಿವೆ. ಹೀಗಾಗಿ ನಮ್ಮ ಸಂವಿಧಾನ ಪ್ರಪಂಚದ ಶ್ರೇಷ್ಠ ಸಂವಿಧಾನವಾಗಿದೆ. ಅದರ ವಿರುದ್ಧ ಸಂಚು ನಡೆಸುತ್ತಿರುವ ಕೋಮುಶಕ್ತಿಗಳನ್ನು ದೂರವಿಡುವುದು ನಮ್ಮ, ನಿಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.