ಮೈಸೂರು: ಮೈಸೂರಿನ ಕುಡಿಯುವ ನೀರಿನ ಸರಬರಾಜು ಪೂರೈಕೆಯನ್ನು ಮೈಸೂರು ಮಹಾನಗರ ಪಾಲಿಕೆ ಖಾಸಗಿಯವರಿಗೆ ವಹಿಸಲು ಹೊರಟಿರುವುದನ್ನು ಖಂಡಿಸಿ ಶುಕ್ರವಾರ ಪಾಲಿಕೆ ಮುಂದೆ ಕರ್ನಾಟಕ ಸೇನಾಪಡೆ ಸದಸ್ಯರು ಪ್ರತಿಭಟನೆ ನಡೆಸಿದರು.
ಮೈಸೂರಿನ ರಾಜ ಮಹಾರಾಜರುಗಳು ಆಗಿನ ಕಾಲದಿಂದಲೂ ಮೈಸೂರಿನ ಜನತೆಗೆ ಅತ್ಯಗತ್ಯವಾದ ಕುಡಿಯುವ ನೀರಿಗೆ ಬಹಳ ಆದ್ಯತೆ ನೀಡಿದ್ದರು.
ಮೈಸೂರು ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಂಡು ಬಂದಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಅಧಿಕಾರಕ್ಕೆ ಬಂದ ಮೇಲೆ ಮೈಸೂರಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ, ನೀರಿಗೆ ತೊಂದರೆ ಆಗದಂತೆ ಕನ್ನಂಬಾಡಿ ಕಟ್ಟ ಸಹ ನಿರ್ಮಿಸಿದರು.
ಇಂತಹ ಜಗತ್ಪ್ರಸಿದ್ಧ ಅರಮನೆಗಳ ನಗರಿ, ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿ ನೆಲೆಸಿರುವ ಮೈಸೂರಿನಲ್ಲಿ ಮಹಾನಗರ ಪಾಲಿಕೆ ನೀರು ಸರಬರಾಜಿಗೆ ಖಾಸಗಿಯವರಿಗೆ ನೀಡುತ್ತೇವೆಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಈ ವೇಳೆ ಕರ್ನಾಟಕ ಸೇನಾಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ತಿಳಿಸಿದರು.
ಈಗಿನ ಬಿಜೆಪಿ ಸರ್ಕಾರ ಸರ್ಕಾರಿ ಸೌಮ್ಯದ ಸಂಸ್ಥೆಗಳನ್ನೆಲ್ಲ ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಖಂಡಿಸಿದರು.
ನೀರು ಸರಬರಾಜು ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡುವುದರಿಂದ ಖರ್ಚು ವೆಚ್ಚಗಳು ಜಾಸ್ತಿಯಾಗುವ ಸಾಧ್ಯತೆ ಇದೆ.
ಜೊತೆಗೆ ಜನರಿಗೆ ಈಗಿನ ನೀರಿನ ದರಕ್ಕಿಂತ 2-3 ಪಟ್ಟು ಹೆಚ್ಚಾಗಿ ಅವರ ಮೇಲೆ ಹೆಚ್ಚಿನ ಹೊರೆಯಾಗಲಿದೆ ಎಂದು ಅವರು ತಿಳಿಸಿದರು.
ಉದಾಹರಣೆಗೆ ಈಗ ಒಂದು ಚಿಕ್ಕ ಮನೆಗೆ 200 ರೂ. ತಿಂಗಳಿಗೆ ನೀರಿನ ಬಿಲ್ಲು ಬರುತ್ತಿದ್ದಲ್ಲಿ ಇದು ಖಾಸಗಿಕರಣವಾದರೆ ಇದು 400 ರಿಂದ 500 ರೂ. ಗೆ ಏರುವ ಸಾಧ್ಯತೆ ಇದೆ.
ಆದ್ದರಿಂದ ಇದು ಅವೈಜ್ಞಾನಿಕವಾಗಿದೆ ಹಾಗೂ ಜನ ವಿರೋಧಿಯಾಗಿದೆ. ಮೈಸೂರು ಮಹಾನಗರ ಪಾಲಿಕೆ ಇಲ್ಲದ ಸಬೂಬು ಹೇಳಿ, ಜನರ ಹೆಸರಿನಲ್ಲಿ ಹಗಲು ದರೋಡೆ ಮಾಡಲು ಹೊರಟಿದೆ ಎಂದು ತೇಜೇಶ್ ಲೋಕೇಶ್ ಗೌಡ ಆರೋಪಿಸಿದರು.
ಮೈಸೂರಿನಲ್ಲಿ ಕುಡಿಯುವ ನೀರು ಸರಬರಾಜು ಪೂರೈಕೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದು ಎಂದು ಮಹಾನಗರ ಪಾಲಿಕೆ ಆಯುಕ್ತರನ್ನು ಆಗ್ರಹಿಸಿದರು.
ಡಾ. ಶಾಂತರಾಜೇಅರಸ್, ಪ್ರಜೀಶ್ ಪಿ, ಕೃಷ್ಣಯ್ಯ ಸಿ. ಎಚ್, ಡಾ. ಮೊಗಣ್ಣ, ಯೋಗೀಶ್ ಉಪ್ಪಾರ, ವಿಜಯೇಂದ್ರ, ಎಳನೀರು ರಾಮಣ್ಣ, ದರ್ಶನ್ ಗೌಡ, ನಾಗಣ್ಣ ಕೆ. ಪಿ, ಮಲ್ಲೇಶ್ ಗೊರೂರು, ಸಿದ್ದರಾಜು, ಬಂಗಾರಪ್ಪ, ಡಾ. ನರಸಿಂಹೇಗೌಡ, ಪರಿಸರ ಚಂದ್ರು, ರಾಧಾ ಕೃಷ್ಣ, ಹನುಮಂತಯ್ಯ,ಅಂಬಾ ಅರಸ್, ದಿಲೀಪ್ ಆರ್, ನಂದಕುಮಾರ್, ಆಟೋ ರಾಜು, ರಾಮನಾಯಕ್, ರವಿ ನಾಯಕ್, ಉಪಸ್ಥಿತರಿದ್ದರು.

