ಬೆಂಗಳೂರು: ಜನರ ಸಮಸ್ಯೆ ಹೆಚ್ಚಾಗುತ್ತಿದೆ ಹಾಗಾಗಿ ಇದರ ಪರಿಹಾರಕ್ಕೆ ಕಾಂಗ್ರೆಸ್ ಸರ್ಕಾರ ತರಲು ಜನರು ತೀರ್ಮಾನಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜಾಧ್ವನಿ ಯಾತ್ರೆಗೆ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಎರಡು ಪಟ್ಟು ಜನರು ಭಾಗವಹಿಸಿ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಹಾಸನ ಮತ್ತು ಮಂಡ್ಯದಲ್ಲಿ ನಮ್ಮ ಪಕ್ಷದ ಒಬ್ಬರೂ ಶಾಸಕರು ಇಲ್ಲ,ಆದರೂ ನಮ್ಮ ನಿರೀಕ್ಷೆಗೂ ಮೀರಿದ ಜನ ಸೇರಿದ್ದರು ಎಂದು ಪರೋಕ್ಷವಾಗಿ ಜೆಡಿಎಸ್ ಗೆ ಟಾಂಗ್ ನೀಡಿದರು.
ಮುಳಬಾಗಿಲಿನ ಕುರುಡು ಮಲೆಗೆ ಭೇಟಿ ನೀಡಿ ಅಲ್ಲಿ ವಿಜಯಕ್ಕೆ ನಾಯಕ ವಿನಾಯಕನಿಗೆ ಪೂಜೆ ಸಲ್ಲಿಸಿ ರಾಜ್ಯಕ್ಕೆ ಎದುರಾಗಿರುವ ನೋವು, ಸಂಕಷ್ಟ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿ ನಾನು ಯಾತ್ರೆ ಆರಂಭಿಸುತ್ತಿದ್ದೇನೆ
ಮತ್ತೊಂದೆಡೆ ನಮ್ಮ ರಾಜ್ಯದಲ್ಲಿ ಕ್ರಾಂತಿಕಾರಿ ಹೋರಾಟ, ಸಾಮಾಜಿಕ ನ್ಯಾಯ ಕೊಟ್ಟ ಬಸವಣ್ಣನ ಭೂಮಿಯಿಂದ ಸಿದ್ದರಾಮಯ್ಯನವರು ಯಾತ್ರೆ ಆರಂಭಿಸುತ್ತಿದ್ದಾರೆ ಎಂದು ತಿಳಿಸಿದರು.
ಟಿಕೆಟ್ ಹಂಚಿಕೆ ವಿಚಾರವಾಗಿ ನಡೆದ ಸಭೆ ಬಗ್ಗೆ ಕೇಳಿದ ಪ್ರಶ್ನೆಗೆ, ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಲಿದೆ ಎಂದು ಅನೇಕರು ಹೇಳುತ್ತಿದ್ದರು. ಆದರೆ ಒಂದೇ ಒಂದು ಅಪಸ್ವರವಿಲ್ಲದೆ ಸಭೆ ನಡೆಯಿತು ಎಂದು ಸಮರ್ಥಿಸಿಕೊಂಡರು ಡಿಕೆಶಿ.
ಪ್ರಣಾಳಿಕೆ ವಿಚಾರವಾಗಿ ಪರಮೇಶ್ವರ ಅವರು ಅಸಮಾಧಾನ ಹೊಂದಿದ್ದಾರಂತಲ್ಲಾ ಎಂಬ ಪ್ರಶ್ನೆಗೆ, ಯಾವುದೇ ಅಸಮಾಧಾನವಿಲ್ಲ. ಪರಮೇಶ್ವರ ಅವರು ಪಕ್ಷಕ್ಕೆ ದೊಡ್ಡ ಆಸ್ತಿ. ರಾಜ್ಯದ ಇತಿಹಾಸದಲ್ಲಿ ಸುದೀರ್ಘ ಕಾಲ ಪಕ್ಷದ ಅಧ್ಯಕ್ಷರಾಗಿದ್ದವರು. ಸುರ್ಜೆವಾಲ ಅವರು ಅವರ ಜತೆ ಸಭೆ ಮಾಡಿದ್ದಾರೆ. ನಾನು ಆ ಸಭೆಗೆ ಹೋಗಲು ಆಗಲಿಲ್ಲ ಎಂದು ಉತ್ತರಿಸಿದರು.

