ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಎಂಬತ್ತನೆ ವರ್ಷದ ಜನ್ಮದಿನೋತ್ಸವದ ಪ್ರಯುಕ್ತ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವ ಪ್ರಯುಕ್ತ ಇಂದು ಬೆಳಿಗ್ಗೆ ಪ್ರಧಾನಯಾಗ–ಆಯುಷ್ಯ ಹೋಮ ಮತ್ತು ಲಕ್ಷ್ಮಿ ನಾರಾಯಣ ಹೋಮ ನೆರವೇರಿತು.
ನಂತರ ಭೂದಾನ, ಗೋದಾನ ಮತ್ತಿತರ ದಾನ ಹಾಸಿಗೆ, ರಗ್ಗು, ನವಧಾನ್ಯಗಳನ್ನು ಋತ್ವಿಕರಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೀಡಿದರು. ಇದೇ ವೇಳೆ ಜಯಲಕ್ಷ್ಮಿ ಮಾತಾ ಅವರ ಪುತ್ಥಳಿಯನ್ನು ಶ್ರೀಗಳು ನೀಡಿದರು.

ಆ ನಂತರ ಶ್ರೀ ಗಣಪತಿ ಸೇರಿ ಎಲ್ಲಾ ದೇವರುಗಳಿಗೆ ಶ್ರೀ ಗಣಪತಿ ಸ್ವಾಮೀಜಿ ಹಾಗೂ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಧನ ಕನಕ ಸಹಿತ ಪೂಜೆ ನೆರವೇರಿಸಿದರು.
ನಂತರ ವಿಷ್ಣುಸಹಸ್ರ ನಾಮ ಪಾರಾಯಣ ನಡೆಯಿತು.
ಆ ನಂತರ ಅತ್ಯಂತ ಪ್ರಮುಖವಾದ ಕನಕಾಭಿಷೇಕವನ್ನು ಸದ್ಭಕ್ತರ ಪರವಾಗಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ನೆರವೇರಿಸಿದರು.
ಶ್ರೀಗಳ ಶಿರದ ಮೇಲೆ ಚಿನ್ಮದ ನಾಣ್ಯಗಳನ್ನು ಇಟ್ಟು ದೇವಾನುದೇವತೆಗಳನ್ನು ಆವಾಹನೆ ಮಾಡಿದ ಜಲದಿಂದ ಕಿರಿಯ ಶ್ರೀಗಳು ಅಭಿಷೇಕ ಮಾಡಿ ಪೂಜಿಸಿ ನಮಸ್ಕರಿಸಿದರು.
ಸಾಮಾನ್ಯವಾಗಿ ಎಂಬತ್ತು ವರ್ಷ ತುಂಬಿ ಎರಡು ತಿಂಗಳು ಆದ ಹಿರಿಯರು ಈ ಸಹಸ್ರಚಂದ್ರ ದರ್ಶನ ಶಾಂತಿ ಮಾಡಿಕೊಂಡು ಕನಕಭಿಷೇಕ ಮಾಡಿಸಿಕೊಳ್ಳುವುದು ರೂಢಿ.
ಈಗ ಆಧ್ಯಾತ್ಮಿಕ ಮೇರು ಪರ್ವತವಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಸಹಸ್ರಚಂದ್ರ ದರ್ಶನ ಶಾಂತಿ, ಕನಕಾಭಿಷೇಕ ನಡೆಯುತ್ತಿರುವುದು ಭಕ್ತರಲ್ಲಿ ಅತ್ಯಂತ ಸಡಗರ ಸಂಭ್ರಮ ತಂದಿದೆ.
ಶ್ರೀ ಕೃಷ್ಣ ಪರಮಾತ್ಮನೇ ಸಹಸ್ರ ಚಂದ್ರ ದರ್ಶನ ಶಾಂತಿ ಬಗ್ಗೆ ತಾಯಿ ಶ್ರೀದೇವಿಗೆ ವಿವರಿಸಿದ್ದಾರೆ.
ಶಾಸ್ತ್ರದಲ್ಲಿ ತಿಳಿಸಿರುವಂತೆ ಸಹಸ್ರ ಚಂದ್ರ ದರ್ಶನ ಶಾಂತಿ ಬಗ್ಗೆ ಶ್ರೀ ಗಣಪತಿ ಸ್ವಾಮೀಜಿಯವರು ಪಾಲಿಸುವವರಾಗಿದ್ದಾರೆ. ಶ್ರೀಗಳವರಿಗೆ ನೆರವೇರುತ್ತಿರುವ ಕನಕಾಭಿಷೇಕ ದರ್ಶನ ಮಾಡುವುದೇ ಮಹಾ ಪುಣ್ಯ ಆಗಿದೆ.
ಕನಕಾಭಿಷೇಕ ಮಾಡಿಸಿಕೊಂಡವರು, ಮಾಡಿದವರು, ಇದರಲ್ಲಿ ಪಾಲ್ಗೊಂಡವರಿಗೆ ಪುಣ್ಯ ಲಭಿಸುತ್ತದೆ.ಅಪಮೃತ್ಯು ನಿವಾರಣೆ ಆಗುತ್ತದೆ. ಆಯಸ್ಸು ವೃದ್ಧಿಯಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಲೋಕ ಕಲ್ಯಾಣಾರ್ಥವಾಗಿ ಇದನ್ನೆಲ್ಲಾ ಮಾಡುತ್ತಿದ್ದು ನಾಡಿನಲ್ಲಿ ಉತ್ತಮ ಮಳೆ, ಬೆಳೆ ಆಗಿ ಸುಭಿಕ್ಷವಾಗಲಿ. ಧನ ಧಾನ್ಯ ಸಮೃದ್ಧವಾಗಲಿ ದೇಶದಲ್ಲಿ ಕಷ್ಟ ಕಾರ್ಪಣ್ಯ ಹೋಗಲಿ, ಎಲ್ಲರಿಗೂ ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಶ್ರೀ ಕೃಷ್ಣ ತಿಳಿಸಿದ ಸಹಸ್ರ ಚಂದ್ರ ದರ್ಶನ ಶಾಂತಿ ಕಥೆ:
ಒಮ್ಮೆ ದೇವಿಯು ಕೃಷ್ಣ ಪರಮಾತ್ಮನಲ್ಲಿ ಪ್ರತಿದಿನ ನಿನಗೆ ಕೊಟ್ಯಾನು ಕೋಟಿ ಭಕ್ತರು ನಮಿಸುತ್ತಾರೆ. ಪ್ರಭು ನೀನು ಯಾರಿಗೆ ನಮಸ್ಕರಿಸುವೆ ಎಂಬ ಕುತೂಹಲ ನನಗೆ ಎಂದು ಕೇಳಿದಾಗ ಕೃಷ್ಣ ಹೀಗೆ ವಿವರಿಸಿದ್ದಾರೆ.
ನಿತ್ಯಾನ್ನದಾತಃ ತರುಣಾಗ್ನಿ ಹೋತ್ರಿಃ
ಮಾಸೋಪವಾಸೀಚ ಪತಿವ್ರತಾಚಃ
ವೇದಾಂತವಿತ್ ಚಂದ್ರ ಸಹಸ್ರಜೀವೀಃ
ಷಡ್ಜೀವ ಲೋಕೇ ಮಮ ವಂದನೀಯಾಃ
ನಿತ್ಯಾನ್ನದಾತಃ –ಪ್ರತಿ ನಿತ್ಯವೂ ಹಸಿದವರಿಗೆ ಅನ್ನದಾನ ಮಾಡುವವರು.
ತರುಣಾಗ್ನಿ ಹೋತ್ರೀಃ – ವಿವಾಹಿತ ಪುರುಷರು ಹದಿನಾರನೆ ವಯಸ್ಸಿನೊಳಗೆ ವೇದಾಧ್ಯಯನ ಮುಗಿಸಿ ಪ್ರತಿ ನಿತ್ಯ ಅಗ್ನಿ ಹೋತ್ರವನ್ನು ಮಾಡುತ್ತಿರುವವರು.
ಮಾಸೋಪವಾಸೀಃ – ಪ್ರತಿ ಮಾಸವೂ ದೇವತಾರಾಧನೆ ಮಾಡುತ್ತಾ ಆಯಾ ಮಾಸದ ಏಕಾದಶಿ ಮುಂತಾದ ಪರ್ವಕಾಲಗಳ ನಿಯಮಗಳನ್ನು ಅನುಸರಿಸುತ್ತಾ ಉಪವಾಸಾದಿಗಳನ್ನು ಮಾಡುವವರು.
ಪತಿವ್ರತಾಃ – ವಿವಾಹಿತ ಸ್ತ್ರೀಯು ಪತಿಯ ಮಾತಿಗೆ ಎದುರಾಡದೆ ಪತಿಯೇ ದೈವವೆಂದು ನಂಬಿದವಳು.
ವೇದಾಂತವಿತ್ – ವೇದ ವೇದಾಂತಗಳನ್ನು ಅಧ್ಯಯನ ಮಾಡಿ ಅದರಲ್ಲಿ ತಿಳಿಸಿರುವಂತೆ ಆಚರಣೆ ಮಾಡುವವರು.
ಚಂದ್ರ ಸಹಸ್ರಜೀವೀಃ – ಎಂಬತ್ತು ವರ್ಷಗಳು ಎಂಟು ತಿಂಗಳು ಕಳೆದು ಪ್ರತಿ ತಿಂಗಳು ಶುಕ್ಲ ತೃತೀಯದಂದು ಸಂಜೆ ಚಂದ್ರನ ದರ್ಶನ ಮಾಡುತ್ತಿರುವವರು ಅಥವಾ ಸಹಸ್ರ ಚಂದ್ರ ದರ್ಶನ ಶಾಂತಿ ಮಾಡಿಕೊಂಡವರು.
ಭೂ ಲೋಕದಲ್ಲಿಯೇ ಇರುವ ಈ ಆರೂ ಜನರನ್ನು ನಾನು ಪ್ರತಿ ನಿತ್ಯ ನಮಸ್ಕರಿಸುತ್ತೇನೆ ಎಂದು ಶ್ರೀ ಕೃಷ್ಣ ಪರಮಾತ್ಮ ತಾಯಿ ಶ್ರೀದೇವಿಗೆ ತಿಳಿಸುತ್ತಾರೆ.

