ಬೆಂಗಳೂರು: ನೂತನ ಭಾರತ ಈಗ ನಮ್ಮ ಕಣ್ಮುಂದೆ ಕಾಣುತ್ತಿದೆ. ಇದಕ್ಕೆ ರಕ್ಷಣಾ ಕ್ಷೇತ್ರದಲ್ಲಿ ಹಾಗು ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಸಾಧಿಸಿರುವ ಪ್ರಗತಿಯೇ ಕಾರಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ಯಲಹಂಕ ವಾಯುನೆಲೆಯಲ್ಲಿ ಸೋಮವಾರ ಆರಂಭಗೊಂಡ 14ನೇ ಆವೃತ್ತಿಯ ಏರೋ ಇಂಡಿಯಾ ಶೋ ಉದ್ಘಾಟಿಸಿ ಮೋದಿ ಅವರು ಮಾತನಾಡಿದರು.
ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಮತ್ತಷ್ಟು ವೇಗ ನೀಡಲಾಗುವುದು ಮೋದಿ ತಿಳಿಸಿದರು.
ನವಭಾರತದ ಸಾಮಥ್ರ್ಯಕ್ಕೆ ಬೆಂಗಳೂರಿನ ಆಗಸ ಸಾಕ್ಷಿಯಾಗುತ್ತಿದೆ. ಹೊಸ ಎತ್ತರವೇ ನವಭಾರತದ ಸತ್ಯ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಎಂದವರು ಹೇಳಿದರು.
100 ರಾಷ್ಟ್ರಗಳ ಉಪಸ್ಥಿತಿಯು ಭಾರತದ ಮೇಲಿನ ವಿಶ್ವ ನಂಬಿಕೆಯನ್ನು ಹೆಚ್ಚಿಸಿದೆ. ಭಾರತ ಮತ್ತು ವಿಶ್ವದ 700ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದಾರೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಮೋದಿ ಹೇಳಿದರು.
ಈ ಹಿಂದೆ ಭಾರತ ಸಶಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇಂದು ವಿಶ್ವಕ್ಕೆ ನಾವು ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುವ ಮಟ್ಟಿಗೆ ಬೆಳೆದಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ರಕ್ಷಣಾ ಉತ್ಪನ್ನಗಳ ರಫ್ತು 5 ಬಿಲಿಯನ್ ದಾಟುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ಅವರು ತಿಳಿಸಿದರು.
ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ 250ಕ್ಕೂ ಹೆಚ್ಚು ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುವ ಗುರಿ ಹೊಂದಿದ್ದು, ಒಟ್ಟಾರೆ 75 ಸಾವಿರ ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಾವು ರಕ್ಷಣಾ ಕ್ಷೇತ್ರದಲ್ಲಿ ಹಲವಾರು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದು, ನಮ್ಮ ಸಾಮಥ್ರ್ಯಕ್ಕೆ ಆತ್ಮ ನಿರ್ಭರ ಯೋಜನೆಯಡಿ ಉತ್ಪಾದಿಸಿರುವ ತೇಜಸ್ ಏರ್ ಕ್ರಾಫ್ಟ್ ಒಂದು ತಾಜಾ ಉದಾಹರಣೆ ಎಂದರು.
ಮೇಕ್ ಇನ್ ಇಂಡಿಯಾ ಯೋಜನೆಯನ್ನು ಮೇಕ್ ಫಾರ್ ವಲ್ರ್ಡ್ನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯಪಾರಾದ ಗೆಹ್ಲೋಟ್, ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ ಅವರುಗಳು ಉಪಸ್ಥಿತರಿದ್ದರು.

