ಬೆಂಗಳೂರು: ಚುನಾವಣೆ ಹೊಸ್ತಿಲಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.ಇತ್ತ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಹಾಗೂ ಆರೋಪ ಮಾಡುವ ತಂತ್ರಗಳು ಕೂಡಾ ಮುಂದುವರಿದಿದೆ.
ಬುಧವಾರ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ಕರೆದು ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಆರೋಪಗಳ ಸುರಿಮಳೆಗೈದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯದ ಬೊಕ್ಕಸವನ್ನು ಸರ್ಕಾರವೇ ಲೂಟಿ ಮಾಡುತ್ತಿದೆ,ಮನಬಂದಂತೆ ಎಲ್ಲಾ ಪ್ರಾಜೆಕ್ಟ್ ಗಳಿಗೆ ಒಪ್ಪಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಟ್ರಾಕ್ಟರ್ ಹಾಗೂ ಅಧಿಕಾರಿಗಳಿಗೆ ವಾರ್ನ್ ಮಾಡುತ್ತಿದ್ದೇನೆ. ನಾವು ಇದನ್ನು ಲಾಜಿಕಲ್ ಎಂಡ್ಗೆ ತಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಸಿದರು.
ಕಾಂಟ್ರಾಕ್ಟರ್ಗಳು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುತ್ತೇವೆ ಯಾರನ್ನೂ ಬಿಡಲ್ಲ, ಎಲ್ಲರನ್ನೂ ಜೈಲಿಗೆ ಹಾಕಿಸ್ತೀವಿ.
ನಾವುಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಕಾಮಗಾರಿಗಳ ಬಗ್ಗೆ ಹಾಗೂ 40% ಕಮಿಷನ್ ಹಗರಣ ತನಿಖೆ ಮಾಡಿಸುತ್ತೇವೆ ಎಂದು ಸಿದ್ದು ತಿಳಿಸಿದರು.
ಒಂದೇ ದಿನದಲ್ಲಿ 18,000 ಕೋಟಿ ಬಿಲ್ ಆಗಿದೆ. ಬಿಜೆಪಿ ಎಂಎಲ್ಎ ಗೂಳಿಹಟ್ಟಿ ಶೇಖರ್ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಎಲೆಕ್ಷನ್ ಫಂಡ್ ರೈಸ್ ಮಾಡಲು ಟೆಂಡರ್ ಹಗರಣ ಮಾಡುತ್ತಿದ್ದಾರೆ ಎಂದು ದೂರಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಯಿಂದ ಸಾವಿರಾರು ಕೋಟಿ ಟೆಂಡರ್ ಅಕ್ರಮ ಬಯಲಿಗೆ ಬಂದಿದೆ ಎಂದು ಆರೋಪಿಸಿದರು.
ಅಸಮಾಧಾನಿತ ಶಾಸಕರ ಸಮಾಧಾನಕ್ಕೆ ಟೆಂಡರ್ ಹಣವಿದ್ದು, ಮಂತ್ರಿ ಸ್ಥಾನ ಸಿಗದವರಿಗೆ ಟೆಂಡರ್ ಆಫರ್ ನೀಡಿದ್ದಾರೆ. ಇದು ಅಂತಿಂಥ ಹಗರಣವಲ್ಲ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ಕಿಡಿಕಾರಿದರು.

