ಮೈಸೂರು: ನಂಜನಗೂಡು ಉಪಚುನಾವಣೆ ಸೋಲಿನ ಕಹಿಯಿಂದ ಹೊರಬಾರದ ಸಂಸದ ಶ್ರೀನಿವಾಸ್ ಪ್ರಸಾದ್ ಉಪಚುನಾವಣೆಯ ಘಟನೆಗಳನ್ನೇ ಇನ್ನೂ ಸ್ಮರಿಸುತ್ತಾ ಮತ್ತೆ ವಾಗ್ಧಾಳಿ ನಡಸಿದ್ದಾರೆ.
ಮಾಜಿ ಸಂಸದ ಧ್ರುವನಾರಾಯಣ್, ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಕಣ್ಮರೆಯಾಗಿದ್ದಾರೆ ಎಂದು
ನಂಜನಗೂಡಿನಲ್ಲಿ ವ್ಯಂಗ್ಯವಾಡಿದ್ದಾರೆ.
ನಂಜನಗೂಡು ಉಪಚುನಾವಣೆಯಲ್ಲಿ ಆರ್ಭಟಿಸಿದ್ದ ಧ್ರುವನಾರಾಯಣ ಮತ್ತು ಮಾಜಿ ಮಂತ್ರಿ ಹೆಚ್ ಸಿ ಮಹದೇವಪ್ಪ ಕಣ್ಮರೆಯಾಗಿದ್ದಾರೆ ಎಂದು ದೂರಿದ್ದಾರೆ.
ಜತೆಗೆ ಮಾಜಿ ಮಂತ್ರಿ ನಂಜನಗೂಡು ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದವೂ ಹರಿಹಾಯ್ದಿದ್ದಾರೆ.
ನಂಜನಗೂಡಿಗೆ ಭೇಟಿ ನೀಡಿದಾಗಲೆಲ್ಲ ಉಪಚುನಾವಣೆಯ ಸೋಲನ್ನು ಸ್ಮರಿಸಿಕೊಳ್ಳುವುದನ್ನೇ ಶ್ರೀನಿವಾಸ ಪ್ರಸಾದ್ ಕಾಯಕ ಮಾಡಿಕೊಂಡಿದ್ದಾರೆ.
ನಂಜನಗೂಡಿನ ಮಿನಿ ವಿಧಾನಸೌಧದಲ್ಲಿ ವಿವಿಧ ಜನಾಂಗದ ಹಕ್ಕುಪತ್ರ ವಿತರಣೆ ಸಂದರ್ಭದಲ್ಲೂ ಇದೇ ಟೀಕೆಯನ್ನೇ ಪ್ರಸಾದ್ ಮುಂದುವರಿಸಿದ್ದು ಇದೆಲ್ಲದಕ್ಕೂ ಉದಾಹರಣೆ.
ಕೆಲ ದಿನಗಳ ಹಿಂದೆ ತಾಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ಮಾಜಿ ಶಾಸಕ ಕೇಶವಮೂರ್ತಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ರಾಜಕೀಯದಲ್ಲಿ ನನಗೆ ಸರಿಸಮಾನನಲ್ಲದ ಕೇಶವಮೂರ್ತಿ ಗೆಲುವಿಗೆ ಕಾಂಗ್ರೆಸ್ ನಾಯಕರು ಟೊಂಕ ಕಟ್ಟಿ ನಿಂತರು.
ನಂಜನಗೂಡು ಉಪಚುನಾವಣೆಯಲ್ಲಿ ನನ್ನ ವಿರುದ್ಧ ಗೆಲುವು ಸಾಧಿಸಿದ ಕೇಶವಮೂರ್ತಿ ಇಂದು ಹಸು, ಎಮ್ಮೆ ಮೇಯಿಸುತ್ತಿರಬೇಕು ಎಂದು ಗೇಲಿ ಮಾಡಿದರು.
ನಂಜನಗೂಡಿನಲ್ಲಿ ಸಂಸದನಾಗಿ ನಾನು ಮತ್ತು ಶಾಸಕ ಹರ್ಷವರ್ಧನ್ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ.
ನಂಜನಗೂಡು ಪಟ್ಟಣದಲ್ಲಿ ಎಲ್ಲಾ ವರ್ಗದ ಜನರಿಗೆ ಸರಿಸಮಾನವಾಗಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದ್ದೇವೆ.
ಸಮುದಾಯ ಭವನದ ನಿವೇಶನಗಳಿಗೆ ತಹಸೀಲ್ದಾರ್ ಸಮ್ಮುಖದಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ.ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ತಾಲೂಕಿನ ಅಭಿವೃದ್ಧಿಯ ಬಗ್ಗೆ ಚರ್ಚಿಸುತ್ತಿದ್ದೇನೆ ಎಂದು ಶ್ರೀನಿವಾಸ ಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ.

