ಅಭಿವೃದ್ಧಿ ವಂಚಿತ ಎನ್.ಆರ್ ಕ್ಷೇತ್ರ: ಬಿಜೆಪಿ ಜನಪ್ರತಿನಿಧಿಗಳ ಬೇಸರ

ಮೈಸೂರು: ನಗರದ ಕೃಷ್ಣರಾಜ, ಚಾಮರಾಜ ವಿಧಾನ ಸಭಾ ಕ್ಷೇತ್ರಗಳು ಅಭಿವೃದ್ಧಿಯಾಗಿವೆ ಆದರೆ,ನರಸಿಂಹ ರಾಜ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ ಇದು ಅಭಿವೃದ್ದಿಯಾಗಬೇಕಾದರೆ, ಬಿಜೆಪಿ ಅಭ್ಯರ್ಥಿ ಶಾಸಕರಾಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರು ಗಾಯತ್ರಿಪುರಂನಲ್ಲಿ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕ್ಷೇತ್ರದ ಪ್ರಜ್ಞಾವಂತ ಮತದಾರರ ಸಂಕಲ್ಪ ತೊಡಬೇಕು ಎಂದು ಸಂಸದ ಪ್ರತಾಪ್ ಸಿಂಹ, ಅವರೊಂದಿಗೆ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಕರೆ ನೀಡಿದರು.

ಕಳೆದ ಎರಡು ದಿನಗಳ ಹಿಂದೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಕ್ರಾಂತಿಕಾರಕ ನಿರ್ಧಾರ ಪ್ರಕಟಿಸಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಅನುಸೂಚಿತ ಜಾತಿಗೆ ಶೇ.೧೫ರಿಂದ ೧೭ಕ್ಕೆ, ಅನುಸೂಚಿತ ಪಂಗಡಕ್ಕೆ ಶೇ.೩ರಿಂದ ೭ಕ್ಕೆ ಏರಿಸಲಾಗಿತ್ತು. ಇದರಲ್ಲಿ ಎಸ್ಸಿ ಸಮುದಾಯದ ಹಲವು ವರ್ಷಗಳ ಬೇಡಿಕೆಯಾದ ಒಳ ಮಿಸಲಾತಿ ನೀಡಿದೆ ಇದರ ಜೊತೆಗೆ ಲಿಂಗಾಯತ ಸಮುದಾಯಕ್ಕೆ ಶೇ.೭ರಷ್ಟು, ಒಕ್ಕಲಿಗ ಸಮುದಾಯಕ್ಕೆ ಶೇ.೬ ರಷ್ಟು ಹೆಚ್ಚಿಸಿದೆ.

ಆಯಾಯ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿ ನಿರ್ಧರವನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.

ನರಸಿಂಹ ರಾಜ ಕ್ಷೇತ್ರ ಮಾತ್ರ ಏಕೆ ಅಭಿವೃದ್ಧಿಯಾಗುತ್ತಿಲ್ಲ ಎಂಬ ಬಗ್ಗೆ ಕ್ಷೇತ್ರದ ಜನ ಒಮ್ಮೆ ಯೋಚಿಸಬೇಕು.

ಎಸ್.ಎ.ರಾಮದಾಸ್ ಮಾತನಾಡಿ ನಮ್ಮ ಕ್ಷೇತ್ರದಲ್ಲಿ ಎಲ್ಲಾ ವರ್ಗಗಳಿಗೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಸವಲತ್ತುಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆದರೆ, ಎನ್.ಆರ್.ಕ್ಷೇತ್ರದ ಹಲವು ಮತದಾರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸವಲತ್ತುಗಳನ್ನು ಸಿಗುತ್ತಿಲ್ಲ ಎಂದು ನಮ್ಮ ಬಳಿ ಬಂದು ಅಲವತ್ತುಕೊಳ್ಳುತ್ತಿದ್ದಾರೆ.

ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಕಾರ್ಡ್ ಸೇರಿದಂತೆ ಇತರೆ ಸವಲತ್ತುಗಳಿಂದ ವಂಚಿತರಾಗುತ್ತಿರುವ ಬಗ್ಗೆ ನಮ್ಮ ಕಾರ್ಯಕರ್ತರಿಂದ ಮಾಹಿತಿ ಬಂದಿದೆ ಎಂದು ಹೇಳಿದರು.

ಇಲ್ಲಿನ ಹಲವು ರಸ್ತೆಗಳು ಗುಂಡಿ ಮಯವಾಗಿದ್ದು, ಓಡಾಡಲು ಜನ  ಕಷ್ಟಪಡುತ್ತಿದ್ದಾರೆ. ಒಟ್ಟಾರೆ ಅಭಿವೃದ್ಧಿಯಿಂದ ಎನ್.ಆರ್.ಕ್ಷೇತ್ರ ವಂಚಿತವಾಗಿದೆ ಹಾಗಾಗಿ ಈ ಕ್ಷೇತ್ರದ ಅಭಿವೃದ್ಧಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಪಣತೊಡಬೇಕು ಎಂದು ಕರೆ ನೀಡಿದರು.

ಎಲ್.ನಾಗೇಂದ್ರ ಮಾತನಾಡಿ ನನ್ನ ಕ್ಷೇತ್ರದಲ್ಲಿ ದಿನನಿತ್ಯ ಮತದಾರರ ಕಷ್ಟಗಳಿಗೆ ಸ್ಪಂದಿಸುತ್ತ, ರಸ್ತೆ, ಚರಂಡಿ, ಯುಜಿಡಿ ಸಂಪರ್ಕ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.

ಈ ಕ್ಷೇತ್ರದ ರಸ್ತೆಗಳು ಗುಂಡಿಮಯವಾಗಿದೆ ಅಭಿವೃದ್ಧಿ ಮರಿಚುಕ್ಕಿಯಾಗಿದೆ ಎಂದು ಬೇಸರ ಪಟ್ಟರು.

 ೨೦೨೩ರ ಚುನಾವಣೆಯಲ್ಲಿ ಅಭಿವೃದ್ಧಿ ಪರವಾಗಿ ಕೆಲಸ ಮಾಡುವ ಶಾಸಕರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಅರಗು ಮತ್ತು ಬಣ್ಣದ ಕಾರ್ಖಾನೆಯ ಅಧ್ಯಕ್ಷ ರಘು ಆರ್.ಕೌಟಿಲ್ಯ ಮಾತನಾಡಿ ಒಬಿಸಿ ಕುಲಕಸುಬುಗಳಿಗೆ ಉತ್ತೇಜಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ ಎಂದು ತಿಳಿಸಿದರು.

ಇದರ ಸದುಪದಯೋಗ ಪಡೆಯಲು ಎನ್.ಆರ್.ಕ್ಷೇತ್ರದ ಹಿಂದುಳಿದ, ಎಸ್ಸಿ-ಎಸ್ಟಿ ಸಮುದಾಯ ಮುಂದಾಗಬೇಕು ಎಂದು ಸಲಹೆ ನೀಡಿದರು.

ಇಷ್ಟು ದಿನ ಎಸ್ಸಿ-ಎಸ್ಟಿ ಮತ್ತು ಒಬಿಸಿ ಸಮುದಾಯದ ಏಳಿಗೆಗೆ ಯಾವುದೇ ಯೋಜನೆಯನ್ನು ಕಾಂಗ್ರೆಸ್ ರೂಪಿಸಿಲ್ಲ. ಹಾಗಾಗಿ ಈ ವೇದಿಕೆ ಮೇಲಿರುವ ಎಲ್ಲಾ ಜನಪ್ರತಿನಿಧಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿರುವಂತೆ ಎನ್.ಆರ್.ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಪಣತೊಡಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.

ಮಾಜಿ ಮೇಯರ್ ಸಂದೇಶ್ ಸ್ವಾಮಿ‌‌ ಹಾಗೂ ಒ.ಬಿ.ಸಿ.ಅಧ್ಯಕ್ಷ ಜೋಗಿಮಂಜು ಕೂಡಾ ಇದಕ್ಕೆ‌ ಧ್ವನಿಗೂಡಿಸಿದರು.

ಒಬಿಸಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಅನಿಲ್ ಧಾಮಸ್,ವಿಭಾಗ ಪ್ರಭಾರಿ ಮೈ ವಿ ರವಿಶಂಕರ್,  ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಗಿರೀಧರ್, ಸೋಮಸುಂದರ್, ವಾಣೀಶ್ ಕುಮಾರ್, ನಗರ ಪಾಲಿಕೆ ಸದಸ್ಯರಾದ ಸತೀಶ್, ಸುಬ್ಬಯ್ಯ, ರಂಗಸ್ವಾಮಿ, ಛಾಯದೇವಿ, ನಾರಯಣ ಲೋಲಪ್ಪ,  ಪ್ರಧಾನ ಕಾರ್ಯದರ್ಶಿ ಗೋಪಾಲ್‌, ಮಣಿರತ್ನಂ, ಅಭಿಲಾಷ್, ಜೀವನ್, ವಿಜಯ್, ಸೂರಜ್, ಶಿವಪ್ಪ, ರಾಚಪ್ಪಾಜೀ,ನಾರಾಯಣ ಅಚಾರ್, ಶಿವರಾಜ್, ಭರತ್, ಜಗದೀಶ್, ಹರಿಶ್ ಮತ್ತಿತರರು ಪಾಲ್ಗೊಂಡಿದ್ದರು.