ಬೆಂಗಳೂರು: ಬಿಜೆಪಿಯ ಅಣೆಕಟ್ಟು ಒಡೆದಿದ್ದು, ಅದರ ನಾಯಕರೆಲ್ಲ ನೀರಿನಂತೆ ಹರಿದು ಬರುತ್ತಿರುವುದಕ್ಕೆ ಮೂರು ಬಾರಿ ಶಾಸಕರಾಗಿದ್ದ ವಿಶ್ವನಾಥ್ ಪಾಟೀಲ್ ಕಾಂಗ್ರೆಸ್ ಸೇರುತ್ತಿರುವುದೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ನಾಯಕ ಶಿವಾನಂದ ಪಾಟೀಲ್, ಅರವಿಂದ ಚೌಹಾಣ್ ಸೇರಿದಂತೆ ಅನೇಕ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡ ವೇಳೆ ಅವರು ಮಾತನಾಡಿದರು.
ಬಿಜಾಪುರ, ಕಲ್ಯಾಣ ಕರ್ನಾಟಕದ ಅನೇಕ ನಾಯಕರು ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಒಪ್ಪಿ ಪಕ್ಷ ಸೇರಲು ಬಯಸಿದ್ದಾರೆ. ಹೀಗಾಗಿ ನಾನು ವಿವಿಧ ಜಿಲ್ಲಾ ಹಾಗೂ ಬ್ಲಾಕ್ ಘಟಕಗಳು ಸ್ಥಳೀಯ ಮಟ್ಟದಲ್ಲಿ ಅನ್ಯ ಪಕ್ಷಗಳ ನಾಯಕರ ಸೇರ್ಪಡೆಗೆ ಅನುಮತಿ ನೀಡಿದ್ದೇನೆ ಎಂದು ತಿಳಿಸಿದರು.
ಈ ಎಲ್ಲಾ ನಾಯಕರ ಸೇರ್ಪಡೆಯಿಂದ ಪಕ್ಷಕ್ಕೆ ಹೆಚ್ಚಿನ ಶಕ್ತಿ ಸಿಕ್ಕಿದೆ ಎಂದು ಹೇಳಿದರು.
ಬಿಜೆಪಿ, ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ದೂರಿದರು.
ಚುನಾವಣಾ ಆಯೋಗ ಮುಖ್ಯಮಂತ್ರಿ ಕಚೇರಿಯ ದೂರವಾಣಿ ಕರೆ ಪಟ್ಟಿ ತರೆಸಿಕೊಳ್ಳಬೇಕು. ಸವದತ್ತಿ ಯೆಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರದಲ್ಲಿ ದೋಷವಿದ್ದರೂ ಅದನ್ನು ತಿದ್ದಲು ಮುಖ್ಯಮಂತ್ರಿ ಕಚೇರಿಯಿಂದ ಚುನಾವಣಾಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹೇರಲಾಗುತ್ತಿದೆ ಎಂದು ದೂರಿದರು.
ನನ್ನ ನಾಮಪತ್ರವನ್ನೇ ತಿರಸ್ಕರಿಸಲು ಬಿಜೆಪಿ ತಂಡ ಪ್ರಯತ್ನಿಸಿತ್ತು. ಚುನಾವಣಾ ಆಯೋಗ ಈ ಅಧಿಕಾರ ದುರುಪಯೋಗ ಗಮನಿಸಬೇಕು ಎಂದು ಡಿಕೆಶಿ ಆಗ್ರಹಿಸಿದರು.
ನಿಮ್ಮ ಅರ್ಜಿ ತಿರಸ್ಕಾರಕ್ಕೆ ಯಾರು ಒತ್ತಡ ಹಾಕಿದ್ದರು ಎಂದು ಕೇಳಿದ ಪ್ರಶ್ನೆಗೆ, ‘ನನ್ನ ಅರ್ಜಿಯನ್ನು ಎಷ್ಟು ಮಂದಿ ಡೌನ್ಲೋಡ್ ಮಾಡಿಕೊಂಡು, ಅರ್ಜಿ ತಿರಸ್ಕಿರಿಸಬೇಕು ಎಂದು ದೊಡ್ಡ ಕಾನೂನು ತಜ್ಞರ ತಂಡವನ್ನೇ ಬಿಜೆಪಿ ನಿಯೋಜಿಸಿತ್ತು ಎಂದು ಪ್ರಶ್ನೆಯೊಂದಕ್ಕೆ ಡಿ.ಕೆ.ಶಿ ಉತ್ತರಿಸಿದರು.
ಚುನಾವಣೆ ಸಮಯದಲ್ಲಿ ಮತ್ತೆ ಪೇಸಿಎಂ ಅಭಿಯಾನ ಆರಂಭಿಸುತ್ತೀರಾ ಎಂಬ ಪ್ರಶ್ನೆಗೆ, ಈ ಬಾರಿಯ ಚುನಾವಣೆಯಲ್ಲಿ 40% ಭ್ರಷ್ಟಾಚಾರ. ನೇಮಕಾತಿ ಹಗರಣ, ಬೆಲೆ ಏರಿಕೆ, ರಾಜ್ಯಕ್ಕೆ ಉತ್ತಮ ಆಡಳಿತ ನೀಡಿ, ರಾಜ್ಯದಲ್ಲಿ ಅಭಿವೃದ್ಧಿ ಬದಲಾವಣೆ ತರುವ ವಿಷಯಗಳು ಪ್ರಮುಖ ಅಂಶಗಳು.
ಈ ಸರ್ಕಾರದ ಅವಧಿ ಇನ್ನು 20 ದಿನಗಳು ಮಾತ್ರ. ಮುಖ್ಯಮಂತ್ರಿಗಳು ಅದಕ್ಕಿಂತ ಮುಂಚಿತವಾಗಿ ರಾಜೀನಾಮೆ ನೀಡುವುದು ಉತ್ತಮ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಗಿಸಲು ಎಂ.ಬಿ ಪಾಟೀಲ್ ಅವರು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಯಡಿಯೂರಪ್ಪ ಮುಗಿಸಲು ಪಿತೂರಿ ನಡೆಸುತ್ತಿರುವವರ ಜೊತೆ ಶೋಭಕ್ಕ ಸೇರಿ ಏನು ಸಂಚು ರೂಪಿಸುತ್ತಿದ್ದಾರೆ ಎಂಬುದು ಜಗಜ್ಜಾಹೀರವಾಗಿದೆ ಎಂದರು ಡಿಕೆಶಿ.
ಯಾರು ಯಾರನ್ನು ಮುಗಿಸಲು ಯತ್ನಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್, ಸವದಿ ಅವರು ಹೇಳಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.

