ಮೈಸೂರು: ಮೈಸೂರಿನ ನರಸಿಂಹರಾಜ ಕ್ಷೇತ್ರ ಕಳೆದ 60 ವರ್ಷಗಳಿಂದಲೂ ಯಾವುದೇ ರೀತಿಯಿಂದ ಅಭಿವೃದ್ಧಿಯಾಗಿಲ್ಲ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಎನ್.ಆರ್.ಕ್ಷೇತ್ರ ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ಈ ಬಾರಿ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದು, ತಮ್ಮನ್ನು ಆಯ್ಕೆ ಮಾಡುವ ವಿಶ್ವಾಸವಿದೆ ಎಂದು ಬಿಜೆಪಿಯಿಂದ ಸ್ಪರ್ಧಿಸಿರುವ ಸಂದೇಶ್ ಸ್ವಾಮಿ ತಿಳಿಸಿದರು.
ಭಾನುವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಡೀ ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳು ಅಭಿವೃದ್ಧಿ ಕಾಣುತ್ತಿದ್ದರೆ, ಮೈಸೂರಿನ ಎನ್.ಆರ್ ಕ್ಷೇತ್ರ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಇದಕ್ಕೆ ಕಾರಣ ಈ ಕ್ಷೇತ್ರದ ಜನರು ಒಂದೇ ಕುಟುಂಬಕ್ಕೆ ಅಧಿಕಾರವನ್ನು ನೀಡುತ್ತಾ ಬಂದಿರುವುದು ಎಂದು ಹೇಳಿದರು.
ಕ್ಷೇತ್ರದಲ್ಲಿ ಅಜೀಜ್ ಸೇಠ್ ಅವರು ಸತತವಾಗಿ ಶಾಸಕರಾಗಿದ್ದರು. ನಂತರ ಅವರ ಪುತ್ರ ತನ್ವೀರ್ ಸೇಠ್ ಸತತವಾಗಿ ಶಾಸಕರಾಗಿ ಆಯ್ಕೆಯಾಗಿ ಬರುತ್ತಿದ್ದಾರೆ. ಆದರೆ ಯಾವುದೇ ರೀತಿಯಲ್ಲೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ.
ಇದರಿಂದಾಗಿ ಯಾವುದೇ ಮೂಲಸೌಲಭ್ಯಗಳಿಲ್ಲದೆ ಜನರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಕ್ಷೇತ್ರದಲ್ಲಿ ಸೂಕ್ತ ರೀತಿಯಲ್ಲಿ ಆಸ್ಪತ್ರೆಗಳಿಲ್ಲ, ಶಾಲಾ ಕಾಲೇಜುಗಳಿಲ್ಲ. ಇದರಿಂದಾಗಿ ಕ್ಷೇತ್ರದ ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸುತ್ತಿದ್ದಾರೆ.
ಹೆಚ್ಚಾಗಿ ಈ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರೇ ವಾಸಿಸುತ್ತಿದ್ದು, ಅವರಿಗೆ ಉದ್ಯೋಗ ಕಲ್ಪಿಸುವಂತಹ ಯಾವುದೇ ವ್ಯವಸ್ಥೆಯನ್ನು ಶಾಸಕರು ಮಾಡಿಲ್ಲ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ಬದಲಾವಣೆಯನ್ನು ತರಲು ನನಗೆ ಬೆಂಬಲ ನೀಡ ಗೆಲ್ಲಿಸಿಕೊಟ್ಟರೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ.ಕ್ಷೇತ್ರಕ್ಕೆ ರಸ್ತೆ, ಕುಡಿಯುವ ನೀರು ಪೂರೈಕೆ ವಸತಿ ಸೌಲಭ್ಯ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಜನರಿಗೆ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು ಸಂದೇಶ್ ಸ್ವಾಮಿ.
ನಾನು ಮೈಸೂರು ನಗರಪಾಲಿಕೆಯ ಸದಸ್ಯನಾಗಿ, ಮೇಯರ್ ಆಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಎರಡು ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಈ ಬಗ್ಗೆ ಜನರ ಅನುಕಂಪದ ಒಲವು ನನ್ನ ಮೇಲಿದೆ.
ಹಾಲಿ ಶಾಸಕ ತನ್ವೀರ್ ಸೇಠ್ ಅವರು ತಮಗೆ ಆರೋಗ್ಯ ಸರಿ ಇಲ್ಲವೆಂದು,ಈ ಬಾರಿ ನನಗೆ ಟಿಕೆಟ್ ಬೇಡ ಎಂದು ಹೇಳಿದ್ದರು. ಆದರೂ ಕೂಡ ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ನೀಡಿದೆ. ಶಾಸಕ ತನ್ವೀರ್ ಸೇಠ್‌ರ ವರ್ತನೆ, ಅಭಿವೃದ್ಧಿಯ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತು ಹೋಗಿರುವ ಕ್ಷೇತ್ರದಲ್ಲಿನ ಜನರ ಮನಸ್ಥಿತಿ ಬದಲಾಗಿದೆ. ಈಗ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಹಾಗಾಗಿ ನನಗೆ ಈ ಬಾರಿ ಅಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.
ನನ್ನ ಸಹೋದರರಾದ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹಾಗೂ ಅವರ ಕುಟುಂಬದವರು ನನ್ನನ್ನು ಈ ಚುನಾವಣೆಯಲ್ಲಿ ಬೆಂಬಲಿಸುತ್ತಾರೆ ಎಂದು ಇದೇ ವೇಳೆ ಸಂದೇಶ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಎನ್.ಆರ್.ಕ್ಷೇತ್ರದ ಅಧ್ಯಕ್ಷ ಭಾನು ಪ್ರಕಾಶ್ ಮಾತನಾಡಿ ಶಾಸಕ ತನ್ವೀರ್‌ಸೇಠ್‌ರ ವರ್ತನೆಯಿಂದ ಜನರು ರೋಸಿ ಹೋಗಿದ್ದಾರೆ. ಎಲ್ಲಾ ಜಾತಿ,ಮತ, ಧರ್ಮಗಳ ಜನರು ಬಿಜೆಪಿ ಬಗ್ಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಕಾರ್ಯಧ್ಯಕ್ಷ ಹೆಚ್.ಜಿ. ಗಿರಿಧರ್, ಪಕ್ಷದ ವಕ್ತಾರ ಡಾ. ಕೆ.ವಸಂತ್ ಕುಮಾರ್, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್‌ರಾಜೇ ಅರಸ್, ಸಹ ವಕ್ತಾರ ಕೇಬಲ್ ಮಹೇಶ್ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

