ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವರುಣ ಭೀಕರ ದುರಂತವನ್ನೇ ತಂದಿದ್ದಾನೆ.
ಭಾರೀ ಮಳೆಗೆ ಮಕ್ಕಳು ಸೇರಿದಂತೆ ಬರೋಬ್ಬರಿ 7 ಮಂದಿ ಬಲಿಯಾಗಿದ್ದಾರೆ.
ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಬಿದ್ದು, ರಸ್ತೆ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳು ಸೇರಿದಂತೆ 7 ಜನ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸಂಜೆ 5 ಗಂಟೆಗೆ ಬಿರುಗಾಳಿ, ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಮಳೆ ಸುರಿದಿದೆ.
ಮಳೆ ಜೋರಾಗುತ್ತಿದ್ದಂತೆ ಬೀದಿಬದಿ ವ್ಯಾಪಾರಿಗಳು, ಕಾಂಪೌಂಡ್ ಪಕ್ಕದಲ್ಲಿ ಆಶ್ರಯ ಪಡೆದಿದ್ದಾರೆ.
ಮಳೆಯಲ್ಲಿ ಮಕ್ಕಳಿಗೆ ತೊಂದರೆಯಾಗುತ್ತೆ ಎಂದುಕೊಂಡು ಕಾಂಪೌಂಡ್ ಬದಿಗೆ ಕರೆತಂದಿದ್ದಾರೆ. ಆದರೆ ಅದೇ ಸಮಯದಲ್ಲಿ ಬೃಹತ್ ಕಾಂಪೌಂಡ್ ಕುಸಿದು 7 ಜನ ದಾರುಣವಾಗಿ ಮೃತಪಟ್ಟಿದ್ದಾರೆ.
ಮೃತರ ಕುಟುಂಬದವರ ದುಃಖದ ಕಟ್ಟೆ ಒಡೆದಿತ್ತು.
ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ:
ವಿಷಯ ತಿಳಿಯುತ್ತಿದ್ದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬೌರಿಂಗ್ ಆಸ್ಪತ್ರೆಗೆ ಧಾವಿಸಿ ಗಾಯಾಳುಗಳನ್ನು ವಿಚಾರಿಸಿ ಸಮಾಧಾನ ಹೇಳಿದರು. ನಂತರ ವೈದ್ಯಾದಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಂತರ ನಗರ ಪಾಲಿಕೆ ಅಧಿಕಾರಿಗಳನ್ನು ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು.ಕಾಂಪೌಂಡ್ ಯಾವಾಗ ನಿರ್ಮಿಸಿದ್ದು,ಯಾರು ಎಂಬ ಬಗ್ಗೆ ವರದಿ ನೀಡುವಂತೆ ತಾಕೀತು ಮಾಡಿದರು.ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸಿಂ ತಾಕೀತು ಮಾಡಿದರು.

