ಮೈಸೂರು: ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲಾ ಕಡೆಯೂ ಸಿಗಬೇಕೆಂಬ ಉದ್ದೇಶದಿಂದ ಮುಕ್ತ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಯಿತು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 18ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಕ್ತ ವಿಶ್ವವಿದ್ಯಾನಿಲಯಗಳು ದೂರ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕಳೆದ ಎರಡೂವರೆ ದಶಕಗಳಲ್ಲಿ ದೂರ ಶಿಕ್ಷಣದ ಮೂಲಕ ದೇಶದಾದ್ಯಂತ ಉನ್ನತ ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ಸಂಸ್ಥೆಯಿಂದ ಎ ಪ್ಲಸ್ ಮಾನ್ಯತೆ ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೂರ ಶಿಕ್ಷಣವು ಪ್ರಸ್ತುತ ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಉತ್ತಮ ಪರಿಣಾಮ ಬೀರಿದೆ. ಇಂದು ಮಹಿಳೆಯರು ಹೆಚ್ಚು ಪದಕಗಳನ್ನು ಪಡೆದಿರುವುದು ಮಹಿಳಾ ಸಬಲೀಕರಣದ ಪ್ರತೀಕವಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯ ಪಟ್ಟರು.
ವಿವೇಕಾನಂದರ ಯುವಕರಿಗೆ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ನೀಡಿದ ಕರೆಯಂತೆ ಎಲ್ಲರೂ ದೇಶದ ಸರ್ವತೋಮುಖ ಪ್ರಗತಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ರಾಷ್ಟ್ರದ ಪ್ರಗತಿಯಲ್ಲಿ ಸಾರ್ವಜನಿಕರ ಕೊಡುಗೆ ಅಗತ್ಯ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಸಾರ್ವಭೌಮ ರಾಷ್ಟ್ರ ವಿಶ್ವಕಲ್ಯಾಣ ಮತ್ತು ವಿಶ್ವಶಾಂತಿಯನ್ನು ಭಾರತ ದೇಶ ಸಾರುತ್ತಿದೆ.
ಆದರೆ ಇಂದು ಇಡೀ ವಿಶ್ವವೇ ಪರಿಸರದ ಸಮಸ್ಯೆಗಳನ್ನು ಎದುರಿಸುತ್ತಿದೆ. ಪರಿಸರವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ.
ಪ್ಲಾಸ್ಟಿಕ್ ಮುಕ್ತ ವಲಯಗಳನ್ನಾಗಿ ಮಾಡುವುದು, ಮಳೆ ನೀರು ಕೊಯ್ಲುಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಇನ್ನಿತರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸರ ಸಂರಕ್ಷಣೆಯ ಆದ್ಯ ಕರ್ತವ್ಯ ನಿಮ್ಮೆಲ್ಲದರಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಅಶೋಕ್ ಎಸ್. ಕಿಣಗಿ ಅವರು ಮಾತನಾಡಿ,ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ತನ್ನ ಚಿಂತನಶೀಲ ಸಂಪ್ರದಾಯವನ್ನು ಮುಂದುವರಿಸಿಕೊಂಡು ತಮ್ಮದೇ ಸೇವಾ ಕ್ಷೇತ್ರದಲ್ಲಿ ಸಮಾಜಕ್ಕೆ ಉನ್ನತ ಮಟ್ಟದ ಹಾಗೂ ಗಮನಾರ್ಹ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು, ಧನ್ವಂತ್ರಿ ಎಜುಕೇಶನಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ಶ್ರೀ ಲಕ್ಷ್ಮಿ ಶಿಕ್ಷಣ ಸಂಸ್ಥೆಗಳ ಸಮೂಹದ ಮುಖ್ಯಸ್ಥರೂ ಆದ ಎನ್ ರಾಮಚಂದ್ರಯ್ಯ ಹಾಗೂ ಚಿಲ್ಡ್ರನ್ಸ್ ಎಜುಕೇಶನ್ ಸೊಸೈಟಿ ಅಧ್ಯಕ್ಷರು ಹಾಗೂ ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಸ್. ಎನ್ ವೆಂಕಟಲಕ್ಷ್ಮಿ ನರಸಿಂಹರಾಜು ಅವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿರುವುದು ಶ್ಲಾಘನೀಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊಫೆಸರ್ ಶರಣಪ್ಪ ವಿ ಹಲಸೆ ಅವರು ಮಾತನಾಡಿ,ಕೆಎಸ್ಒಯು ಕೇಂದ್ರ ಸರ್ಕಾರದ ಎಐಸಿಟಿಇ ಮತ್ತು ಎನ್ ಸಿ ಟಿ ಇ ಸಂಸ್ಥೆಗಳ ಮಾನ್ಯತೆಯನ್ನು ಪಡೆದುಕೊಂಡಿದ್ದು, ಯುಜಿಸಿ-ಡಿಇಬಿ ಸಂಸ್ಥೆಯು ಪ್ರಸ್ತುತದಲ್ಲಿ 39 ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಮಾನ್ಯತೆ ನೀಡಿದೆ ಎಂದು ವಿವರಿಸಿದರು.
ಹೊಸ 12 ಪದವಿ ಕಾರ್ಯಕ್ರಮಗಳಿಗೆ ಸದರಿ ಸಂಸ್ಥೆಯ ಮಾನ್ಯತೆಯನ್ನು ಶೀಘ್ರದಲ್ಲಿ ನಿರೀಕ್ಷಿಸಲಾಗಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷ 2023-24 ರಿಂದ ಹೊಸದಾಗಿ 13 ಆನ್ಲೈನ್ ಶಿಕ್ಷಣ ಕ್ರಮಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಲಾನಿಕಾಯದ ಒಬ್ಬ ಸಂಶೋಧನಾ ವಿದ್ಯಾರ್ಥಿಗೆ ಪಿಎಚ್ ಡಿ ಪದವಿ, 44 ವಿವಿಧ ಪದವಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳು, 48 ವಿವಿಧ ಪದವಿ ವಿದ್ಯಾರ್ಥಿಗಳಿಗೆ ರ್‍ಯಾಂಕ್ ಮತ್ತು 27 ವಿವಿಧ ಪದವಿಗಳ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು
ಅಲ್ಲದೆ 5240 ಮಹಿಳಾ ವಿದ್ಯಾರ್ಥಿಗಳೊಳಗೊಂಡಂತೆ ಒಟ್ಟು 8721 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತ್ತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಯಿತು
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲ ಸಚಿವರಾದ ಪ್ರೊ. ಕೆ.ಎಲ್.ಎನ್ ಮೂರ್ತಿ,ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೊ. ಕೆ ಬಿ ಪ್ರವೀಣ, ಪ್ರೊ. ಲಕ್ಷ್ಮಿ ಸೇರಿದಂತೆ ಕರಾಮುವಿ ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬ್ಬಂದಿ ಹಾಜರಿದ್ದರು.

