ಬೆಂಗಳೂರು: ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತು ಹಾಕಲು ಅಗತ್ಯ ಆಡಳಿತಾತ್ಮಕ ಶಾಸನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜಪಾಲರು ಮಾತನಾಡಿದರು.
ಕಾನೂನು ವ್ಯವಸ್ಥೆಗೆ ಆದ್ಯತೆ, ನಗರಾಭಿವೃದ್ಧಿ, ಜನಸ್ನೇಹಿ ಆಡಳಿತ, ಭ್ರಷ್ಟಾಚಾರ ನಿರ್ಮೂಲನೆ, ಕೌಶಲ್ಯಾಭಿವೃದ್ಧಿ, ಸಾಂಸ್ಥಿಕ ಹಾಗೂ ಪಾರಂಪರಿಕ ಚಟುವಟಿಕೆಗಳ ಪುನರುತ್ಥಾನವನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಕಾನೂನು ಸುಧಾರಣೆಗೆ ಆದ್ಯತೆ ಮಹಿಳೆಯರು, ಯುವ ಸಬಲೀಕರಣ, ನಗರ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ವಿಚಾರಗಳನ್ನು ಅವರು ಉಲ್ಲೇಖಿಸಿದರು.
ರಾಜ್ಯ ಸರ್ಕಾರದ ಮುಂದಿನ ಐದು ವರ್ಷಗಳ ಅಭಿವೃದ್ಧಿಯ ಯೋಜನೆಗಳು ಮತ್ತು ಸಂಕಲ್ಪವನ್ನು ತಿಳಿಸಿದರು.
ರಾಜ್ಯದಲ್ಲಿ ಜನಸಂಖ್ಯೆಯ ಹೆಚ್ಚು ಭಾಗ ಸುಶಿಕ್ಷಿತ ವಾಗುತ್ತಿದೆ,ಆದರೆ ಆಧುನಿಕ ತಂತ್ರಜ್ಞಾನ ಬೆಸೆಯುತ್ತಿರುವಾಗ ಸಾಮರಸ್ಯ ಕದಡುವ ಗುಣವುಳ್ಳ ಕೆಲ ಜನರ ದುಷ್ಟ ಚಿಂತನೆಗಳು ತಲೆ ಎತ್ತುತ್ತಿವೆ ಎಂದು ರಾಜ್ಯಪಾಲರು ವಿಷಾದಿಸಿದರು.
ಭಿನ್ನ ವಿಭಿನ್ನ ಸಂಸ್ಕೃತಿಗಳನ್ನು ಒಗ್ಗೂಡಿಸಿ ಬದುಕುವುದೇ ಕರ್ನಾಟಕ ರಾಜ್ಯದ ತತ್ವ. ಸಾವಿರಾರು ವರ್ಷಗಳಿಂದ ಇದು ಪಾಲನೆ ಆಗುತ್ತಿದೆ.
ಪ್ರೇಮ ಸಹಬಾಳ್ವೆಯ ಪರವಾಗಿ ಜನ ಇದ್ದಾರೆ ಈ ಆಶಯಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂದು ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಇದಕ್ಕೂ ಮೊದಲು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತಿತರರು ಸ್ವಾಗತಿಸಿ ಕರೆತಂದರು.

