ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ಪಂಚಖಾತ್ರಿಗಳು ಪ್ರತಿಧ್ವನಿಸಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಕೋಲಾಹಲ ಉಂಟಾಗಿ ಸ್ಪೀಕರ್ ಅಧಿವೇಶನವನ್ನು ಕೆಲ ಕಾಲ ಮುಂದೂಡಿದರು.
ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು. ಆಡಳಿತ ಪಕ್ಷದ ಶಾಸಕ ಕೆ.ಎನ್.ಶಿವಲಿಂಗೇಗೌಡ ಕೇಳಿದ ಪ್ರಶ್ನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರ ನೀಡಲು ಆರಂಭಿಸಿದರು.
ಆಗ ಮಧ್ಯ ಪ್ರವೇಶಿಸಿದ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, ತಾವು ಕಳುಹಿಸಿರುವ ನಿಲುವಳಿ ಸೂಚನೆಯ ಪ್ರಾಥಮಿಕ ಪ್ರಸ್ತಾಪಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಪ್ರಶ್ನೋತ್ತರ ಆರಂಭಗೊಂಡಿರುವುದರಿಂದ ಅನಂತರ ಅವಕಾಶ ನೀಡುವುದಾಗಿ ಸಭಾಧ್ಯಕ್ಷರು ಭರವಸೆ ನೀಡಿದರು.
ಆದರೆ ಅದಕ್ಕೆ ಒಪ್ಪದ ಬಿಜೆಪಿ ಶಾಸಕರು, ಪ್ರಾಥಮಿಕ ಪೂರ್ವ ವಿಷಯ ಮಂಡನೆಗೆ ಅವಕಾಶ ನೀಡಲೇಬೇಕೆಂದು ಪಟ್ಟು ಹಿಡಿದು ಗದ್ದಲ ಆರಂಭಿಸಿದರು.
ಬಿಜೆಪಿಯ ಸುನೀಲ್‍ಕುಮಾರ್, ಆರ್.ಅಶೋಕ್, ಆರಗ ಜ್ಞಾನೇಂದ್ರ , ಡಾ.ಸಿ.ಎನ್.ಅಶ್ವಥನಾರಾಯಣ, ಪ್ರಭುಚೌವ್ಹಾಣ್, ಸಿ.ಸಿ.ಪಾಟೀಲ್ ಸೇರಿದಂತೆ ಅನೇಕ ನಾಯಕರು ನಿಲುವಳಿ ಸೂಚನೆಯ ಪ್ರತಿಪಾದನೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರ ಮೇಲೆ ಒತ್ತಡ ಹೇರಿದರು.
ಸದನ ನಿಯಮಾವಳಿಗಳ ಪ್ರಕಾರ ನಡೆಯಬೇಕು, ಹಾಗಾಗಿ ಪ್ರಶ್ನೋತ್ತರ ಈಗಾಗಲೇ ಆರಂಭವಾಗಿದೆ. ಶಾಸಕರ ಹಕ್ಕುಗಳನ್ನು ಗೌರವಿಸಬೇಕಿದೆ. ಮೊದಲು ಪ್ರಶ್ನೋತ್ತರಕ್ಕೆ ಅವಕಾಶ ನೀಡಿ. ನಂತರ ನಿಮ್ಮ ವಾದವನ್ನು ಕೇಳುತ್ತೇನೆ ಎಂದು ಸಭಾಧ್ಯಕ್ಷರು ಮನವೊಲಿಸಲು ಯತ್ನಿಸಿದರು.
ಇದನ್ನು ಒಪ್ಪದ ಬಿಜೆಪಿ ನಾಯಕರು, ನಾವು ಸಭಾಧ್ಯಕ್ಷರ ಪೀಠಕ್ಕೆ ಗೌರವ ನೀಡುತ್ತೇವೆ. ನ್ಯಾಯ ಸಮ್ಮತವಾಗಿ ಸಭಾಧ್ಯಕ್ಷರು ವಿರೋಧ ಪಕ್ಷಗಳಿಗೆ ಹೆಚ್ಚು ಮಾತನಾಡಲು ಅವಕಾಶ ನೀಡಬೇಕು. ಆಡಳಿತ ಪಕ್ಷದ ಒತ್ತಡಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಪ್ರತಿಪಕ್ಷಗಳ ಶಾಸಕರು ತಮ್ಮ ಸ್ಥಾನದ ಗೌರವ ಕಾಪಾಡಿಕೊಳ್ಳಬೇಕು ಎಂದು ಸಭಾಧ್ಯಕ್ಷರು ತಿಳಿ ಹೇಳಿದರು. ಆದರೂಗದ್ದಲ ಮುಂದುವರೆಯಿತು
ಈ ಮಧ್ಯೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ನಮ್ಮ ಸರ್ಕಾರ ಪಂಚಖಾತ್ರಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದರಿಂದ ಬಿಜೆಪಿಯವರಿಗೆ ಹೊಟ್ಟೆಹುರಿಯನ್ನು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಟೀಕಿಸಿದರು.
ಅದಕ್ಕಾಗಿ ಗದ್ದಲ ಮಾಡುತ್ತಿದ್ದಾರೆ. ಮೊದಲು ಪ್ರಶ್ನೋತ್ತರ ಮುಗಿಯಲಿ. ಅನಂತರ ಬಿಜೆಪಿ ಮುಖಂಡರ 45 ದಿನಗಳ ನುಡಿಮುತ್ತುಗಳನ್ನು ಕೇಳಿಸಿಕೊಳ್ಳೋಣ. ಸರ್ಕಾರ ಎಲ್ಲಾ ರೀತಿಯ ಚರ್ಚೆಗೆ ಸಿದ್ಧವಿದೆ. ಪ್ರತಿ ಪದಕ್ಕೂ ಉತ್ತರ ನೀಡಲು ಬದ್ಧ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ಅವರು ನಿಮ್ಮ ಉಚಿತ,ಖಚಿತ ಎಂಬ ನುಡಿ ಮುತ್ತುಗಳ ಬಗ್ಗೆಯೇ ಚರ್ಚೆಯಾಗಬೇಕಿದೆ ಎಂದಾಗ, ಡಾ.ಸಿ.ಎನ್.ಅಶ್ವಥನಾರಾಯಣ ಕೂಡಾ ಜನರಿಗೆ ಕೊಟ್ಟ ಮಾತನ್ನು ಈಡೇರಿಸುತ್ತಿಲ್ಲ ನೀವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಡಿ.ಕೆ.ಶಿವಕುಮಾರ್, ಇಂತಹ ಮಾತುಗಳಿಗಾಗಿಯೇ ಜನ ನಿಮ್ಮನ್ನು ಸೋಲಿಸಿ ಅಲ್ಲಿ ಕೂರಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಪ್ರಶ್ನೋತ್ತರವನ್ನು ಬದಿಗಿಟ್ಟು, ಯಾವಾಗಲೂ ನಿಲುವಳಿ ಸೂಚನೆಯನ್ನು ಚರ್ಚೆ ಮಾಡಿದ ಉದಾರಣೆ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಆಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಗದ್ದಲ, ಗಲಾಟೆ, ಜೋರಾಯಿತು.
ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷಗಳ ಶಾಸಕರು ಮೊಂಡಾಟ ಮಾಡುತ್ತಿದ್ದಾರೆ. ಪ್ರಶ್ನೋತ್ತರ ಬಳಿಕ ಯಾವುದೇ ಚರ್ಚೆ ನಡೆದರೂ ಅದಕ್ಕೆ ನಾವು ಸಿದ್ದರಿದ್ದೇವೆ ಎಂದರು.
ಈ ಹಂತದಲ್ಲಿ ಮತ್ತೊಮ್ಮೆ ವಾದ-ವಿವಾದಗಳು ನಡೆದವು.
ಬಿಜೆಪಿ ನಾಯಕ ಬಸವನಗೌಡ ಯತ್ನಾಳ್, ನಿಲುವಳಿ ವಾದ ಮಂಡನೆಗೆ ಅವಕಾಶ ನೀಡಬೇಕು. ಇಲ್ಲವಾದರೆ ಪ್ರತಿಭಟನೆ ಮಾಡುತ್ತೇವೆ ಎಂದು ಉತ್ತರಿಸಿದರು.
ಆರಂಭಿಕ ವಾದ ಮಂಡನೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು,ಐದು ಗ್ಯಾರಂಟಿಗಳ ಮೂಲಕ ಜನರನ್ನು ವಂಚಿಸುತ್ತಿರುವ ಸರ್ಕಾರಕ್ಕೆ ದಿಕ್ಕಾರ ಎಂದು ಕೂಗಿದರು
ಬಿಜೆಪಿ ಶಾಸಕರು ಪ್ರತಿಭಟನೆ ಕೈ ಬಿಟ್ಟು ಪ್ರಶ್ನೋತ್ತರದಲ್ಲಿ ಶಾಸಕರು ಪ್ರಶ್ನೆಗಳನ್ನು ಕೇಳಲು ಅವಕಾಶ ಮಾಡಿಕೊಡಬೇಕು. ಶಾಸಕರ ಹಕ್ಕುಗಳನ್ನು ಗೌರವಿಸಬೇಕು ಎಂದು ಸಭಾಧ್ಯಕ್ಷರು ಮನವಿ ಮಾಡಿದರು.
ನಾವು ಪ್ರಶ್ನೆ ಕೇಳಬೇಕು, ಮೊದಲು ಪ್ರಾಥಮಿಕ ವಾದ ಮಂಡನೆಗೆ ಅವಕಾಶ ಕೊಡಬೇಕೆಂದು ಬಿಜೆಪಿಯವರು ಪಟ್ಟು ಹಿಡಿದರು.
ನೀವು ಏನೇ ಹಠ ಮಾಡಿದರೂ ನಿಲುವಳಿ ಪ್ರಸ್ತಾಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಭಾಧ್ಯಕ್ಷರು ಸ್ಪಷ್ಟಪಡಿಸಿದರು.
ಈ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಆಡಳಿತ ಪಕ್ಷದ ಇತರೆ ಶಾಸಕರು, ನಿಮ್ಮಲ್ಲಿ ವಿರೋಧ ಪಕ್ಷದ ನಾಯಕನೇ ಇಲ್ಲ. ಯಾರ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತೀರಿ ಎಂದು ಲೇವಡಿ ಮಾಡಿದರು.
ಬಿಜೆಪಿ ಶಾಸಕರ ಧರಣಿಗೆ ಪ್ರತಿಯಾಗಿ ಕಾಂಗ್ರೆಸ್ ಶಾಸಕರು ಸಭಾಂಗಣದಲ್ಲೇ ಒಟ್ಟುಗೂಡಿಕೊಂಡು ಪ್ರತಿಭಟಿಸಿದರು.
ಈ ಮಧ್ಯೆ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರ ನಡುವಿನ ಗಲಾಟೆಯಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಹಾಗಾಗಿ ಸಭಾಧ್ಯಕ್ಷರು ಕಲಾಪವನ್ನು ಕೆಲಕಾಲ ಮುಂದೂಡಿದರು.

