ಮೈಸೂರು ಸೇರಿ ಐದು ನಗರಗಳು ಪ್ಲಾಸ್ಟಿಕ್ ಮುಕ್ತ -ಈಶ್ವರ ಖಂಡ್ರೆ

ಮೈಸೂರು: ಮೈಸೂರು ನಗರ ಸೇರಿದಂತೆ ರಾಜ್ಯದ ಐದು ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡುವುದಾಗಿ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಶನಿವಾರ‌ ಬೆಳಿಗ್ಗೆ ಮೈಸೂರಿನ ಸುತ್ತೂರು ಶಾಖಾಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂ‌ದಿಗೆ ಸಚಿವರು ಮಾತನಾಡಿದರು.

ರಾಜ್ಯದಲ್ಲಿ ಅಷ್ಟೇ ಅಲ್ಲ ವಿಶ್ವಾದ್ಯಂತ ಪ್ಲಾಸ್ಟಿಕ್ ಅತಿ ದೊಡ್ಡ ಸಮಸ್ಯೆಯಾಗಿದೆ, ಪ್ಲಾಸ್ಟಿಕ್ ತ್ಯಾಜ್ಯದಿಂದ ನೂರಾರು ಸಮಸ್ಯೆಗಳು ತಲೆ ದೋರುತ್ತಿವೆ ಹಾಗಾಗಿ ಪ್ಲಾಸ್ಟಿಕ್ ಮುಕ್ತ ನಗರಗಳನ್ನು ಮಾಡುವ ಸಂಕಲ್ಪವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ ಎಂದು ತಿಳಿಸಿದರು.

ವಿಶ್ವ ಪರಿಸರ ದಿನದಂದು 5 ನಗರಗಳನ್ನು ಏಕಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲು ಸಂಕಲ್ಪ ಮಾಡಿದ್ದೆವು, ಅದರಂತೆ ಕಲಬುರಗಿ, ಬೀದರ್, ಮೈಸೂರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಮೊದಲ ಹಂತದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡುವುದಾಗಿ ತಿಳಿಸಿದರು.

ಬಂಡಿಪುರ ಅರಣ್ಯ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಭ್ರಷ್ಟಾಚಾರ ಎಸಗಿದ್ದಾರಲ್ಲಾ‌ ಎಂಬ ಪ್ರಶ್ನೆಗೆ‌‌ ಖಂಡ್ರೆ, ಈ ಬಗ್ಗೆ ಶಾಸಕ ಗಣೇಶ್ ಪ್ರಸಾದ್ ಅವರ ದೂರಿನ ಅನ್ವಯ ತನಿಖೆಗೆ ಆದೇಶಿಸಲಾಗಿದೆ ವರದಿ ಬಂದ ನಂತರ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.

ನಮ್ಮಇಲಾಖೆಯನ್ನು ಭ್ರಷ್ಟ ಮುಕ್ತ ಪಾರದರ್ಶಕ ಆಡಳಿತ ನೀಡಲು ಸಂಕಲ್ಪ ಮಾಡಿದ್ದು ಈಗಾಗಲೇ ಭ್ರಷ್ಟಾಚಾರ ಆರೋಪದ ಮೇಲೆ ಇಬ್ಬರು ಡಿ.ಸಿ.ಎಫ್ ಗಳನ್ನು ಅಮಾನತು ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಮಾನವ ಮತ್ತು ವನ್ಯಜೀವಿಗಳ ನಡುವೆ ಸದಾ ಸಂಘರ್ಷ ಇದೆಯಲ್ಲಾ ಇದಕ್ಕೆ ಏನು ಕ್ರಮ ಕೈಗೊಳ್ಳುವಿರಿ ಎಂದು ಮಾಧ್ಯಮದವರು ಸಚಿವರನ್ನು ಪ್ರಶ್ನಿಸಿದರು.

ಅದಕ್ಕೆ, ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಪ್ರತಿ ಮನುಷ್ಯನ ಜೀವವೂ ಅತ್ಯಮೂಲ್ಯ, ವನ್ಯಜೀವಿಗಳಿಂದ ಮಾನವ ಪ್ರಾಣ ಹಾನಿ ಆಗದಂತೆ ಕ್ರಮವಹಿಸಲು ಇಲಾಖೆಗೆ ಸೂಚಿಸಲಾಗಿದೆ.

ಆನೆಗಳನ್ನು ತಕ್ಷಣ ಕಾಡಿಗೆ ಅಟ್ಟಲು ಎರಡು ಹೊಸ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ರೈಲ್ವೆ ಬ್ಯಾರಿಕೇಡ್ ನಿರ್ಮಿಸಿ ಆನೆಗಳು ನಾಡಿಗೆ ಬಾರದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್ ನಲ್ಲಿ ಇದಕ್ಕೆ 120 ಕೋಟಿ ರೂ ಮೀಸಲಿಟ್ಟಿದ್ದಾರೆ ಎಂದು ಖಂಡ್ರೆ ತಿಳಿಸಿದರು.