ಬೆಂಗಳೂರು: ಘರ್ ವಾಪ್ಸಿ ಮಾಡಲು ಹೋದರೆ ಅರ್ಧ ಬಿಜೆಪಿ ಮತ್ತು ಅರ್ಧ ಜೆಡಿಎಸ್ ಖಾಲಿಯಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಲಸಿಗರ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ, ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಯಾವುದೇ ಕಂಡಿಷನ್ ಇಲ್ಲದೆ ಬಂದರೆ ಸ್ವಾಗತ ಇದೆ ಎಂದು ತಿಳಿಸಿದರು.
ನಾವು ಆಪರೇಷನ್ ಹಸ್ತ ಮಾಡುವುದಕ್ಕೆ ಹೊರಟಿಲ್ಲ, ಬಿಜೆಪಿ, ಜೆಡಿಎಸ್ ಒಡೆಯಲು ಹೋಗುತ್ತಿಲ್ಲ,ಯಾರ ಯಾರ ಅಸ್ತಿತ್ವ ಏನು ಅನ್ನೋದನ್ನು ಜನರೇ ತೋರಿಸಿಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಬಿಜೆಪಿ ಹಾಗೂ ಜೆಡಿಎಸ್‌ನವರು ಅವರವರ ಅಸ್ತಿತ್ವ ಕಾಪಾಡಿಕೊಳ್ಳಲಿ ಎಂದರು.
ಚೆಲುವರಾಯಸ್ವಾಮ ಅವರ ಸಂಪರ್ಕದಲ್ಲಿ ಕೆಲವರು ಇರಬಹುದು, ಕೆಲವರು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ.
ಘರ್ ವಾಪ್ಸಿ ಅಂತ ಮಾಡೋಕೆ ಹೋದರೆ ಅರ್ಧ ಬಿಜೆಪಿ, ಅರ್ಧ ಜೆಡಿಎಸ್ ಖಾಲಿಯಾಗೋದು ಗ್ಯಾರಂಟಿ ಎಂದು ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದರು.
ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆದಿರುಬಗ್ಗೆ ಪ್ರತಿಕ್ರಿಯಿಸಿದ ಅವರು ಯಡಿಯೂರಪ್ಪರನ್ನು ಬಿಜೆಪಿಯವರು ಹೇಗೆ ನಡೆಸಿಕೊಂಡರು ಅಂತ ಎಲ್ಲರಿಗೂ ಗೊತ್ತಿದೆ ಎಂದರು.
ಈಗ ಅಲ್ಲಿ ಕ್ಯಾಪ್ಟನ್ನೂ ಇಲ್ಲಾ, ಆಗೋಕೂ ಯಾರೂ ರೆಡಿ ಇಲ್ಲ, ಯಡಿಯೂರಪ್ಪ ಅವರ ಈಗ ಮಾತು ನಡೆಯುತ್ತಿದ್ದರೆ ಇಷ್ಟು ಜನ ಬಿಜೆಪಿಯವರು ಬಿಟ್ಟು ಬರ್ತಾ ಇದ್ರಾ ಎಂದು ಪ್ರಶ್ನಿಸಿದರು.
ಚುನಾವಣೆ ಬಂದಾಗ ಯಡಿಯೂರಪ್ಪ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡಿದ್ದರು. ಯಡಿಯೂರಪ್ಪ ಹೇಳಿದವರಿಗೆ ಎಷ್ಟು ಜನರಿಗೆ ಟಿಕೆಟ್ ಕೊಟ್ಟರು,ಅವರಿಗೆ ಕಣ್ಣೀರು ತರಿಸಿ ಕೆಳಗಿಳಿಸಿದ್ದನ್ನು ಎಲ್ಲರೂ ನೋಡಿದ್ದಾರೆ ಎಂದು ಹೇಳಿದರು.
ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ಹಿರಿಯ ದಲಿತ ಸಚಿವರ ವಿರೋಧ ಕುರಿತು ಪ್ರತಿಕ್ರಿಯಿಸಿ, ಸುಧಾಮ್ ದಾಸ್ ಅವರಿಗೆ ಕೊಡಲೇಬಾರದು ಅಂತ ಏನೂ ಹೇಳಿಲ್ಲ. ಪರಿಶೀಲಿಸಿ ಅಂತ ಪತ್ರ ಬರೆದಿದ್ದಾರೆ.
ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಪ್ರಿಯಾಂಕ್ ಹೇಳಿದರು.

