ವರ್ಗಾವಣೆ ದಂಧೆ, ಕಮೀಷನ್ ವ್ಯವಹಾರ ಮರೆಮಾಚಲು ಘರ್ ವಾಪ್ಸಿ ನಾಟಕ: ಹೆಚ್.ಡಿ.ಕೆ.

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಈಗ ಕಾವೇರಿ, ಕನ್ನಡಿಗರ ಬಗ್ಗೆ ಚಿಂತೆ ಇಲ್ಲ. ಅವರಿಗೆ ಘರ್ ವಾಪ್ಸಿಯದ್ದೇ ಚಿಂತೆಯಾಗಿದೆ. ಈ ಚಿಂತೆಯಲ್ಲಿರುವ ಅವರು ನಮ್ಮನ್ನು ಸರ್ವಪಕ್ಷ ಸಭೆಗೆ ಕರೀತಾರೋ ಇಲ್ವೋ ಗೊತ್ತಿಲ್ಲ. ಅವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ಕುಟುಕಿದರು.

ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಜರಗನಹಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರಕಾರ ವರ್ಗಾವಣೆ ದಂಧೆ, ಕಮೀಷನ್ ವ್ಯವಹಾರ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಹಾದಿ ಬೀದಿಯಲ್ಲಿ ಜನರು ಛೀ, ಥೂ ಎನ್ನುತ್ತಿದ್ದಾರೆ. ಇದನ್ನು ಮರೆ ಮಾಚಲು ಘರ್ ವಾಪ್ಸಿ ನಾಟಕ ಆಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಟೀಕಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಅರ್ಧಕ್ಕರ್ಧ ಮುಗಿದು ಹೋಗುತ್ತದೆ, ಜೆಡಿಎಸ್ ಮುಗಿದೇ ಹೋಗುತ್ತದೆ ಅಂತಿದ್ದಾರೆ. ನಿನ್ನೆ ಮೊನ್ನೆ ಆಯ್ಕೆ ಆದವರು ಕೂಡ 10-20ಕ್ಕೂ ಹೆಚ್ಚು ಎಂಎಲ್ ಎಗಳು ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ, ಆ ಪಕ್ಷದಲ್ಲಿ ಇರುವ ಶಾಸಕರ ತಳಮಳದ ಬಗ್ಗೆ ಅವರು ಮಾತನಾಡುತ್ತಿಲ್ಲ, ಯಾಕೆ ಎಂದು ಅವರು ಪ್ರಶ್ನಿಸಿದರು.

ಬೆಂಗಳೂರಿನ ನಾಗರಿಕರಿಗೆ ಕುಡಿಯುವ ನೀರು, ರೈತರಿಗೆ ರಕ್ಷಣೆ ನೀಡಬೇಕಾದ್ದು ಸರಕಾರದ ಕೆಲಸ. ಅದರಲ್ಲೂ ರಾಜಧಾನಿಯಲ್ಲಿ ನೀರಿನ ಬವಣೆ ಶುರುವಾಗಿದೆ. ಆದರೆ ರಾಜ್ಯ ಸರಕಾರ ಕನ್ನಡಿಗರನ್ನು ನಿರ್ಲಕ್ಷ್ಯ ಮಾಡಿ ನೆರೆ ರಾಜ್ಯಕ್ಕೆ ನೀರು ಹರಿಸುತ್ತಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.

ಪ್ರತಿಪಕ್ಷಗಳು ಹಾಗೂ ಜನರಿಂದ ವಿರೋಧ, ಟೀಕೆಗಳು ವ್ಯಕ್ತವಾದ ಮೇಲೆ ಸರಕಾರಕ್ಕೆ ಜ್ಞಾನೋದಯವಾಗಿದೆ. ನೀರನ್ನು ಬಿಟ್ಟ ಮೇಲೆ ಸುಪ್ರೀಂ ಕೋರ್ಟ್ ಗೆ ಹೋಗ್ತೀವಿ ಎನ್ನುತ್ತಿದ್ದಾರೆ. ತಮಿಳುನಾಡಿನವರು ಅರ್ಜಿ ಹಾಕಿದ ಕೂಡಲೇ ಸರಕಾರ ಆಕ್ಷೇಪಣೆ ಸಲ್ಲಿಸಬೇಕಿತ್ತು. ತಮಿಳುನಾಡಿನಲ್ಲಿ ಕುರುವೈ ಬೆಳೆ ವಿಸ್ತೀರ್ಣವನ್ನು ನಾಲ್ಕು ಪಟ್ಟು ಹೆಚ್ಚು ಮಾಡಿಕೊಂಡಿದ್ದಾರೆ. ಅದನ್ನು ನಮ್ಮ ಸರಕಾರ ವಿರೋಧ ಮಾಡಲಿಲ್ಲ, ಕೇಂದ್ರ ಸರಕಾರವೂ ಅದನ್ನು ನಿಲ್ಲಿಸಲಿಲ್ಲ. ಕನ್ನಡಿಗರ ಬದುಕಿನ ಜನತೆ ರಾಷ್ಟ್ರೀಯ ಪಕ್ಷಗಳೂ ಚೆಲ್ಲಾಟ ಆಡುತ್ತಿವೆ. ಅದಕ್ಕೆ ನಮ್ಮಲ್ಲೂ ಕೈಜೋಡಿಸಿದ್ದಾರೆ ಎಂದು ಅವರು ಹೇಳಿದರು.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಸಭೆ ಕರೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ʼಊರು ಕೊಳ್ಳೆ ಹೊಡೆದ ದಿಡ್ಡಿ ಬಾಗಿಲು ಹಾಕಿದರುʼ ಎನ್ನುವಂತೆ ಆಗಿದೆ ಎಂದು ಹೇಳಿದರು.