ಕಾವೇರಿ ನದಿ ನೀರು ವಿವಾದ:ಕೋರ್ಟ್ ತೀರ್ಮಾನಕ್ಕೆ ಎಲ್ಲರೂ ಬದ್ದ -ಹೆಚ್.ಸಿ.ಮಹದೇವಪ್ಪ

ಮೈಸೂರು: ಕಾವೇರಿ ನದಿ ನೀರು ವಿವಾದ ಬಗ್ಗೆ ಕೋರ್ಟ್ ತೀರ್ಮಾನಕ್ಕೆ ಎಲ್ಲರೂ ಬದ್ದರಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್,ಸಿ ಮಹದೇವಪ್ಪ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಬರದ ಪರಿಸ್ಥಿತಿಯಲ್ಲಿ ಎಲ್ಲರೂ ಸಂಕಷ್ಟವನ್ನ ಹಂಚಿಕೊಳ್ಳಬೇಕಿದೆ ಎಂದರು.

ಕಾವೇರಿ ಕರ್ನಾಟಕದ ಉಸಿರು. ನೂರಾರು ವರ್ಷಗಳಿಂದ ಮದ್ರಾಸ್ ಪ್ರಾಂತ್ಯ ಇದ್ದಾಗಿನಿಂದಲೂ ನಮಗೂ ತಮಿಳುನಾಡಿಗೂ ವ್ಯಾಜ್ಯ ನಡೆಯುತ್ತಲೇ ಇದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ.

ಯಾರಿಗೆ ಎಷ್ಟೆಷ್ಟು ನೀರು ಹಂಚಿಕೆಯಾಗಬೇಕು ಎಂಬುದು ತೀರ್ಮಾನವಾಗಿದೆ. ಕೋರ್ಟ್ ತೀರ್ಮಾನಕ್ಕೆ ಎಲ್ಲರು ಬದ್ದರಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಕಡಿಮೆ ಮಳೆ ಬಿದ್ದಿದೆ, ನೀರಿನ ಸಂಗ್ರಹ ಕಡಿಮೆ ಇದೆ. ಕಟ್ಟು ಮಾದರಿಯಲ್ಲಿ ನೀರು ನೀಡಬೇಕೆಂದು ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿದೆ.

ವೈಯಕ್ತಿಕ ಹಿತಾಸಕ್ತಿಗಾಗಿ ಯಾವುದೇ ಸರ್ಕಾರ ಕೆಲಸ ಮಾಡುವುದಿಲ್ಲ. ರಾಜ್ಯದ ರೈತರ ಹಿತೈದೃಷ್ಟಿಯಿಂದಲೇ ಕೆಲಸ ಮಾಡಬೇಕು. ಇದರಲ್ಲಿ ರಾಜಕೀಯ ಬೇಯಿಸುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು.