ಬೆಂಗಳೂರು: ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ನೀಡಿ ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಂವಿಧಾನ ವಿರೋಧಿಗಳ ಒಡೆದು ಆಳುವ ನೀತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಜಯಂತೋತ್ಸವ ಮತ್ತು ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ರಚನಾ ಸಮಿತಿಗೆ ಅಂಬೇಡ್ಕರ್ ಅವರು ಅಧ್ಯಕ್ಷರಾಗದೇ ಹೋಗಿದ್ದರೆ ನಮ್ಮ ದೇಶಕ್ಕೆ ಇಷ್ಟೊಂದು ಅರ್ಥಪೂರ್ಣವಾದ ಸಂವಿಧಾನ ದೊರೆಯುತ್ತಿರಲಿಲ್ಲ ಎಂದು ಹೇಳಿದರು.
ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳನ್ನು ತಮ್ಮ ಮುಖ್ಯಮಂತ್ರಿ ಸ್ಥಾನದ ಮೂಲಕ ಸಮರ್ಥವಾಗಿ ಜಾರಿ ಮಾಡಲು ದೇವರಾಜ ಅರಸು ಅವರು ಶ್ರಮಿಸಿದರು.
ಹೀಗಾಗಿ ಅವರಿಗಿಂತ ಮುಂಚಿನ ಯಾವ ಮುಖ್ಯಮಂತ್ರಿಗಳೂ ಜಾರಿ ಮಾಡದ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಯಾಗಿ ಜಾರಿ ಮಾಡಿದರು ಎಂದು ವಿವರಿಸಿದರು.
ದೇವರಾಜಅರಸು ಅವರು ಉಳುವವನೇ ಭೂ ಒಡೆಯ ಎನ್ನುವ ಕಾನೂನನ್ನು ಬಿಜೆಪಿ ಯವರು ಉಲ್ಟಾ ಮಾಡಿ ಉಳ್ಳವನೇ ಭೂ ಒಡೆಯ ಎಂದು ಬದಲಾಯಿಸಿಬಿಟ್ಟಿದ್ದಾರೆ. ಇದಕ್ಕಾಗಿ ಸಂವಿಧಾನ 79 (a), (b) ರದ್ದುಪಡಿಸಿದ್ದಾರೆ ಎಂದು ಸಿಎಂ ಟೀಕಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ದಲಿತ ಸಂಘರ್ಷ ಸಮಿತಿ ಮುಖಂಡ ಡಿ.ಜಿ ಸಾಗರ್ ಸೇರಿದಂತೆ ಅನೇಕ ದಲಿತ ಮುಖಂಡರು ಭಾಗವಹಿಸಿದ್ದರು.

