ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಪ್ರಾರಂಭ; ಮೊದಲ ವಿಮಾನದಲ್ಲಿ ಪ್ರಯಾಣಿಸಿದ ಬಿಎಸ್‌ವೈ, ಎಂ.ಬಿ ಪಾಟೀಲ್

ಶಿವಮೊಗ್ಗ: ಶಿವಮೊಗ್ಗ ಭಾಗದ ಜನರ ಬಹುವರ್ಷಗಳ ಕನಸು ಕಡೆಗೂ‌ ಈಡೇರಿದ್ದು ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಗುರುವಾರ ಆಗಮಿಸಿದ್ದರಿಂದ ಜನತೆಯ ಸಂಭ್ರಮ ಹೇಳತೀರದು.

ಬೆಂಗಳೂರಿನಿಂದ  ಶಿವಮೊಗ್ಗಕ್ಕೆ ಹೊರಟ ಮೊದಲ ಇಂಡಿಗೋ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಎಂ.ಬಿ ಪಾಟೀಲ್, ಸಂಸದ ಬಿ.ವೈ ರಾಘವೇಂದ್ರ,ಶಾಸಕ ಬಿ.ವೈ ವಿಜಯೇಂದ್ರ,ಮಾಜಿ ಸಚಿವ ಆರಗ ಜ್ಞಾನೇಂದ್ರ ಮತ್ತಿತರ ಜನ ಪ್ರತಿನಿಧಿಗಳು ಪ್ರಯಾಣಿಸಿ ಖುಷಿ ಪಟ್ಟರು.

ಶಿವಮೊಗ್ಗದ ಏರ್ಪೋರ್ಟ್ ನಿಂದ ಗುರುವಾರದಿಂದ ವಿಮಾನ ಹಾರಾಟ ಅಧಿಕೃತ ವಾಗಿ ಆರಂಭವಾಗಿದೆ.

ಶಿವಮೊಗ್ಗದಲ್ಲಿ ಇಳಿದ ಮೊದಲ ವಿಮಾನಕ್ಕೆ ವಾಟರ್ ಸೆಲ್ಯೂಟ್ ಮೂಲಕ ಸ್ವಾಗತ ಮಾಡಲಾಯಿತು.

ಮೊದಲ ವಿಮಾನದಲ್ಲಿ ಆಗಮಿಸಿದ ಗಣ್ಯರನ್ನು ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಮತ್ತಿತರ‌ ಅಧಿಕಾರಿಗಳು ಸ್ವಾಗತಿಸಿದ್ದು ವಿಶೇಷವಾಗಿತ್ತು.

ಮೊದಲ ವಿಮಾನ ಹಾರಾಟದ ಸುದ್ದಿ ತಿಳಿದು ಶಿವಮೊಗ್ಗ ಜನ ಸಂತಸ ವ್ಯಕ್ತಪಡಿಸಿದ್ದಾರೆ.