ಮೈಸೂರು: ಮಳೆಯಿಲ್ಲದೆ ರಾಜ್ಯ ಸಂಕಷ್ಟಕ್ಕೆ ಸಿಲುಕಿದ್ದರೂ, ರೈತರ ವಿರೋಧದ ನಡುವೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ಮಣಿದ ರಾಜ್ಯ ಸರ್ಕಾರ ಬುಧವಾರದಿಂದಲೇ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡಿದೆ.
ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರಾವರಿ ಪ್ರಾಧಿಕಾರ ಆದೇಶ ನೀಡಿರುವುದರಿಂದ ಕೆಆರ್ಎಸ್ ನಿಂದ ನೀರು ಹರಿಸಲಾಗುತ್ತಿದೆ.
ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ, ನಿತ್ಯ 5 ಸಾವಿರ ಕ್ಯೂಸೆಕ್ ನಂತೆ, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕಿದೆ.
ನೀರಾವರಿ ಇಲಾಖೆ ಇದಕ್ಕಾಗಿ, ಕೃಷ್ಣರಾಜ ಜಲಾಶಯದಿಂದ 4,398 ಕ್ಯೂಸೆಕ್ ಹಾಗೂ ಕಬಿನಿ ಜಲಾಶಯದಿಂದ 2,000 ಕ್ಯೂಸೆಕ್ ನೀರನ್ನು ಮಂಗಳವಾರ ರಾತ್ರಿಯಿಂದಲೇ ತಮಿಳುನಾಡಿಗೆ ಬಿಡುಗಡೆ ಮಾಡುತ್ತಿದೆ.
ಕೆಆರ್‌ಎಸ್‌ನಲ್ಲಿ 24 ಟಿಎಂಸಿ ಅಡಿ ನೀರು ಮತ್ತು ಕಬಿನಿಯಲ್ಲಿ 13 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ.
ಮುಂದಿನ 15 ದಿನಗಳ ವರೆಗೆ ತಮಿಳುನಾಡಿಗೆ ದಿನಕ್ಕೆ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡುತ್ತಿದ್ದಂತೆಯೇ ಸರ್ಕಾರ ರಾಜ್ಯದ ವಾಸ್ತವಿಕ ಸ್ಥಿತಿಯನ್ನು ಪ್ರಾಧಿಕಾರಕ್ಕೆ ತಿಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರಾಜ್ಯದ ರೈತರ ಹಿತ ಕಾಪಾಡಲು ಹಾಗೂ ಕುಡಿಯುವ ನೀರಿನ ಅಗತ್ಯತೆ ಪೂರೈಸಲು ಸರ್ಕಾರ ಕಾನೂನು ಹೋರಾಟ ಮುಂದುವರೆಸಲಿದೆ ಎಂದು ತಿಳಿಸಿದ್ದಾರೆ.
ಸೆ,12ರವರೆಗೆ 15 ದಿನಗಳ ಕಾಲ ಕರ್ನಾಟಕ-ತಮಿಳುನಾಡು ಗಡಿಯಲ್ಲಿನ ಬಿಳಿಗೊಂಡ್ಲು ಜಲಾಶಯಕ್ಕೆ ಪ್ರತಿದಿನ 5,000 ಕ್ಯುಸೆಕ್ ಕಾವೇರಿ ನೀರನ್ನು ಬಿಡುಗಡೆಗೊಳಿಸುವಂತೆ ಸಿಡಬ್ಲುಎಂಎ ಮಂಗಳವಾರ ಕರ್ನಾಟಕಕ್ಕೆ ನಿರ್ದೇಶ ನೀಡಿತ್ತು.
ಕರ್ನಾಟಕವು ಇದನ್ನು ಬಲವಾಗಿ ವಿರೋಧಿಸಿತ್ತಾದರೂ 5,000 ಕ್ಯುಸೆಕ್ ನೀರು ಬಿಡುಗಡೆಗೆ ಕಾವೇರಿ ಜಲ ನಿಯಂತ್ರಣ ಸಮಿತಿಯ ಶಿಫಾರಸುಗಳನ್ನು ಸಿಡಬ್ಲುಎಂಎ ಎತ್ತಿ ಹಿಡಿದಿತ್ತು.
ಈ ನಡುವೆ ಸಿಡಬ್ಲುಎಂಎ ನಿರ್ದೇಶನಗಳನ್ನು ಪಾಲಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಸರ್ವೋಚ್ಛ ನ್ಯಾಯಾಲಯ ಬೀಸುವ ಚಾಟಿ ಏಟನ್ನು ತಪ್ಪಿಸಿಕೊಳ್ಳಲು ಯತ್ನ ನಡೆಸುತ್ತಿದೆ.

