ಮೈಸೂರು: ವಿಶ್ವ ವಿಖ್ಯಾತ ದಸರಾ ಆಚರಣೆಯ ಹಿನ್ನೆಲೆ ಯಲ್ಲಿ ಗಜ ಪಯಣಕ್ಕೆ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಪೂಜೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ತಿಳಿಸಿದರು.
ದಸರಾ ಗಜ ಪಯಣಕ್ಕೆ ವೀರನ ಹೊಸಹಳ್ಳಿ ಬಳಿ ಚಾಲನೆ ನೀಡಿದ ಬಳಿಕ ಸಚಿವರು ಮಾತನಾಡಿದರು.
ದಸರಾ ಎನ್ನುವುದು ಕುಣಿತಕ್ಕೆ, ಸಂತೋಷಕ್ಕೆ ಸೀಮಿತವಲ್ಲ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆ. ಆದ್ದರಿಂದ ಇದು ವಿಶ್ವ ವಿಖ್ಯಾತಿ ಯನ್ನು ಪಡೆದಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದ ಮೇಲೆ 75 ವರ್ಷಗಳನ್ನು ಕಳೆದಿದ್ದೇವೆ. ಅನೆ ಮೇಲೆ 750 ಕೆಜಿ ತೂಕದ ಅಂಭಾರಿಯನ್ನು ಮೆರವಣಿಗೆ ಮಾಡಿ ನಮ್ಮ ಸಂಸ್ಕೃತಿಯನ್ನು ಬಿಂಬಿಸಲಾಗುತ್ತದೆ. ನಮ್ಮ ದೇಶದ 140 ಕೋಟಿ ಜನರೆಲ್ಲ ಒಂದೇ ಎಂಬ ಸಂದೇಶವನ್ನು ಸಾರಲಾಗುತ್ತದೆ ಎಂದು ಹೇಳಿದರು.
ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ. ಶೇಕಡಾ 33 ರಷ್ಟು ಅರಣ್ಯ ಪ್ರದೇಶ ಇರಬೇಕು, ಆದರೆ ರಾಜ್ಯದಲ್ಲಿ ಶೇಕಡಾ 21 ರಷ್ಟು ಮಾತ್ರ ಇದೆ. ಆದ್ದರಿಂದ ಪ್ರತಿಯೊಬ್ಬರು ಕಾಡನ್ನು ಹಾಗೂ ಕಾಡು ಪ್ರಾಣಿಗಳನ್ನು ಉಳಿಸಬೇಕು ಎಂದು ಎಚ್.ಸಿ.ಮಹದೇವಪ್ಪ ಮನವಿ ಮಾಡಿದರು.
ಅರಣ್ಯ ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ದಸರಾ ಆನೆಗಳ ಪಟ್ಟಿ ಹಾಗೂ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು,ದಸರಾಗೆ 14 ಆನೆಗಳನ್ನು ಕಳುಹಿಸುತ್ತೇವೆ. ಇದರಲ್ಲಿ ಮೊದಲ ಹಂತವಾಗಿ 9 ಆನೆಗಳನ್ನು ಕಳುಹಿಸಲಾಗುತ್ತಿದೆ. ಸೆಪ್ಟಂಬರ್ 05 ರಂದು ಅರಮನೆ ದ್ವಾರದಲ್ಲಿ ಸ್ವಾಗತಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಕೃತಿ ಪರಿಸರವನ್ನು ಉಳಿಸಬೇಕು. ಇಲ್ಲದಿದ್ದರೆ ತಾಪಮಾನ ಹೆಚ್ಚಳವಾಗಿ ಹವಮಾನ ವೈಪರೀತ್ಯ ಉಂಟಾಗುತ್ತದೆ ಎಂದು ತಿಳಿಸಿದರು.
ಮಹಾ ಪೌರರಾದ ಶಿವಕುಮಾರ್ ಮಾತನಾಡಿ ಮೈಸೂರಿನ ಅರಸರು ದಸರಾ ಆಚರಣೆಯನ್ನು ಜಾರಿಗೆ ತಂದರು.100 ವರ್ಷಗಳ ಹಿಂದೆಯೇ ಮೈಸೂರು ನಗರ ವಿದ್ಯುತ್ ಛಕ್ತಿಯನ್ನು ಪಡೆಯಿತು. ರಾಜರು ಉತ್ತಮ ನಗರ, ಉತ್ತಮ ರಸ್ತೆ ನಿರ್ಮಾಣ ಮಾಡಿದರು. ಮೈಸೂರು ಬೆಳವಣಿಗೆಗೆ ಮೈಸೂರು ರಾಜರ ಕೊಡುಗೆಯನ್ನು ನಾವೆಲ್ಲರೂ ನೆನೆಯಬೇಕು ಎಂದು ತಿಳಿಸಿದರು.
ಹುಣಸೂರು ವಿಧಾನ ಸಭಾ ಕ್ಷೇತ್ರದ ಶಾಸಕ ಜಿ ಡಿ ಹರೀಶ್ ಗೌಡ ಅವರು ಮಾತನಾಡಿ, ಅರಣ್ಯ ಇಲಾಖೆಯ ಗುತ್ತಿಗೆ ಆಧಾರದ ಸಿಬ್ಬಂದಿಗಳು ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಾರೆ ಇವರಿಗೆ ಸಕಾಲದಲ್ಲಿ ಸಂಬಳ ನೀಡಬೇಕು, ಇವರನ್ನು ಖಾಯಂ ಮಾಡಿ ಸೇವಾ ಭದ್ರತೆ ನೀಡಬೇಕು ಎಂದು ಅರಣ್ಯ ಸಚಿವರಲ್ಲಿ ಮನವಿ ಮಾಡಿದರು.
ಇದೇ ವೇಳೆ ಮಾವುತರನ್ನು ಗಣ್ಯರು ಸನ್ಮಾನ ಮಾಡಿ ಕಳುಹಿಸಿಕೊಟ್ಟರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ. ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ, ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಡಿ ಸಿ ಎಫ್ ಸೌರಭ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

