ಬೆಂಗಳೂರು: ತಂತ್ರಜ್ಞಾನ ಮಾನವನ ಅಭಿವೃದ್ಧಿಗೆ ಸಾಧನವಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ಟೆಕ್ ಸಮ್ಮಿಟ್ ಅಂಗವಾಗಿ ಸೋಮವಾರ ಉದ್ಯಮಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಅಂತರಗಳನ್ನು ಕಡಿಮೆ ಮಾಡಿ ಜೀವನಮಟ್ಟ ಸುಧಾರಣೆ, ಸುಸ್ಥಿರ ಅಭಿವೃದ್ಧಿಯನ್ನು ಪ್ರೇರೇಪಿಸುವ ಶಕ್ತಿಯನ್ನು ತಂತ್ರಜ್ಞಾನ ಹೊಂದಿದೆ ಎಂದು ಹೇಳಿದರು.
ತಂತ್ರಜ್ಞಾನದ ಅಭಿವೃದ್ಧಿ ಎಲ್ಲರನ್ನು ಒಳಗೊಂಡು ಎಲ್ಲರಿಗೂ ದೊರೆಯುವಂತೆ ಮಾಡುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
ದೇಶದ ಡಿಜಿಟಲ್ ಭವಿಷ್ಯವನ್ನು ಕರ್ನಾಟಕ ಮುನ್ನಡೆಸಲು ಸಾಧ್ಯವಿದೆ. ನಾವೀನ್ಯತಾ ತಂತ್ರಜ್ಞಾನ ಹಾಗೂ ಪ್ರಗತಿಯೆಡೆಗೆ ನಮ್ಮ ಬದ್ಧತೆಗೆ ಬೆಂಗಳೂರು ಟೆಕ್ ಸಮ್ಮಿಟ್ ಸಾಕ್ಷಿಯಾಗಿದೆ ಎಂದು ಹೇಳಿದರು.
ತಂತ್ರಜ್ಞಾನದಲ್ಲಿ ನಮ್ಮ ಸಾಧನೆಯನ್ನು ಮಾತ್ರವಲ್ಲದೇ ನಮ್ಮ ರಾಜ್ಯದ ಅದಮ್ಯ ಚೇತನವನ್ನು ವಾಖ್ಯಾನಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನಕ್ಕೆ ಇನ್ನಷ್ಟು ವೇಗವನ್ನು ನೀಡಲು ನಮಗಿರುವ ಅಚಲ ಬದ್ಧತೆಯನ್ನು ಟೆಕ್ ಸಮ್ಮಿಟ್ ಪ್ರತಿನಿಧಿಸುತ್ತದೆ ಎಂದು ಹೇಳಿದರು
80ರ ದಶಕದ ಅಂತ್ಯ ಹಾಗೂ 90 ರ ದಶಕದಲ್ಲಿಯೇ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ದೂರದೃಷ್ಟಿಯಂತೆ ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಐಟಿ/ಬಿಟಿ ಗೆ ಭದ್ರ ಬುನಾದಿಯನ್ನು ಹಾಕಿತ್ತು ಎಂದು ಸಿಎಂ ತಿಳಿಸಿದರು.
ನೀತಿ ನಿರೂಪಣೆ, ತಂತ್ರಜ್ಞಾನ ಹಾಗೂ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲಾಯಿತು. ಕರ್ನಾಟಕದ ಮೊತ್ತಮೊದಲ ಐಟಿ ನೀತಿಯನ್ನು ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ 1992 ರಲ್ಲಿ ರೂಪಿಸಿತು. ಈ ನೀತಿಯು ದೇಶಕ್ಕೇ ಮಾದರಿ ಐಟಿ ನೀತಿಯಾಗಿ ಹೊರಹೊಮ್ಮಿತು.
ಕಾಂಗ್ರೆಸ್ ಸರ್ಕಾರ ರಾಜಕೀಯ ವ್ಯವಸ್ಥೆಯಲ್ಲಿ ಸದಾ ಸ್ಥಿರತೆಯನ್ನು ತಂದುಕೊಟ್ಟಿದ್ದು, ಆಡಳಿತದಲ್ಲಿ ಸುಸ್ಥಿರತೆ ತರಲು ಹಾಗೂ ದೀರ್ಘಾವಧಿ ಹೂಡಿಕೆಗಳನ್ನು ಕೈಗೊಳ್ಳಲು ಶ್ರಮಿಸಿದೆ ಎಂದರು.
ಬೆಂಗಳೂರು ಐಟಿ ರಾಜಧಾನಿಯಾಗಿದ್ದು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದೆ. ಬೆಂಗಳೂರು ಐಟಿ/ಬಿಟಿ ರಫ್ತಿನಲ್ಲಿ ಮುಂಚೂಣಿಯಲ್ಲಿದ್ದು , ವಿಶ್ವದಲ್ಲಿಯೇ ಮೊದಲ ಸ್ಥಾನಕ್ಕೇರಲು ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದು ನಮ್ಮ ಸರ್ಕಾರ ಈ ಗುರಿಯನ್ನು ಸಾಧಿಸಲು ಹಿಂದೆ ಬೀಳುವುದಿಲ್ಲ ಎಂದು ಸಿದ್ದರಾಮಯ್ಯ ದೃಢ ನುಡಿಯಲ್ಲಿ ತಿಳಿಸಿದರು.

