ನವದೆಹಲಿ: ಕೋವಿಡ್ ನಂತರದ ಪ್ರಪಂಚವು ನಂಬಿಕೆಯ ಕೊರತೆಯಿಂದ ಬಳಲುತ್ತಿದೆ, ಯುದ್ಧವು ಅದನ್ನು ದುಪ್ಪಟ್ಟುಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹಳೆಯ ಸಮಸ್ಯೆಗಳಿಗೆ ಉತ್ತರಗಳನ್ನು ಹುಡುಕುತ್ತಿರುವ ಕಾಲದಲ್ಲಿ ನಾವು ವಾಸಿಸುತ್ತಿದ್ದೇವೆ. ಮಾನವ ಕೇಂದ್ರಿತ ವಿಧಾನದೊಂದಿಗೆ ನಮ್ಮ ಜವಾಬ್ದಾರಿಗಳನ್ನು ಪೂರೈಸುವ ಅಗತ್ಯವಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿಯ ಪ್ರಗತಿ ಮೈದಾನ್ ಅವರಣದ ಭಾರತ್ ಮಂಟಪಂನಲ್ಲಿ ಜಿ20 ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಭಾರತದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಾಯಸ್ ಎಂಬ ಕಲ್ಪನೆಯು ಜಗತ್ತಿಗೆ ಮಾರ್ಗದರ್ಶಿಯಾಗಬಹುದು ಎಂದು ಆಶಿಸಿದರು.
ಜಿ20 ಅಧ್ಯಕ್ಷರಾಗಿ ಭಾರತವು ನಂಬಿಕೆ ಕೊರತೆಯನ್ನು ಪರಸ್ಪರ ವಿಶ್ವಾಸವನ್ನಾಗಿ ಪರಿವರ್ತಿಸಲು ಇಡೀ ಜಗತ್ತಿಗೆ ಮನವಿ ಮಾಡುತ್ತದೆ ಎಂದು ಹೇಳಿದರು.
ಜಾಗತಿಕ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಸಮಯ ಇದು ಎಂದು ಮೋದಿ ಸಲಹೆ ನೀಡಿದರು.
ಉತ್ತರ ಮತ್ತು ದಕ್ಷಿಣದ ನಡುವಿನ ಒಡಕು, ಪೂರ್ವ ಮತ್ತು ಪಶ್ಚಿಮ ನಡುವಿನ ಅಂತರ, ಆಹಾರ ಮತ್ತು ಇಂಧನ ನಿರ್ವಹಣೆ, ಭಯೋತ್ಪಾದನೆ, ಸೈಬರ್ ಭದ್ರತೆ, ಆರೋಗ್ಯ, ಇಂಧನ ಅಥವಾ ನೀರಿನ ಭದ್ರತೆ, ಭವಿಷ್ಯದ ಪೀಳಿಗೆಗೆ ನಾವು ದೃಢವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಪ್ರಧಾನಿ ತಿಳಿಸಿದರು.
ನಿಮ್ಮೆಲ್ಲರ ಬೆಂಬಲದೊಂದಿಗೆ, ನಾನು ಆಫ್ರಿಕನ್ ಯೂನಿಯನ್ ಅನ್ನು ಜಿ20ಗೆ ಸೇರಲು ಆಹ್ವಾನಿಸುತ್ತೇನೆ ಎಂದು ಹೇಳಿದ ಕೂಡಲೆ ನರೇಂದ್ರ ಮೋದಿಯವರ ಪ್ರಸ್ತಾಪವನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡವು.
ನಂತರ ಕೊಮೊರೊಸ್ ಒಕ್ಕೂಟದ ಅಧ್ಯಕ್ಷ, ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರನ್ನು ಜಿ20 ಹೈ ಟೇಬಲ್‍ನಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳಲು ಆಹ್ವಾನಿಸಲಾಯಿತು.
ಜಿ20 ಒಕ್ಕೂಟಕ್ಕೆ ಆಫ್ರಿಕನ್ ಒಕ್ಕೂಟ ಸೇರ್ಪಡೆ ಬಗ್ಗೆ ನರೇಂದ್ರ ಮೋದಿ ಘೋಷಣೆ ಮಾಡಿದ್ದು,ಈ ಮೂಲಕ ಜಿ20 ಒಕ್ಕೂಟದ 21ನೇ ದೇಶವಾಗಿ ಆಫ್ರಿಕನ್ ಒಕ್ಕೂಟ ಸೇರ್ಪಡೆಯಾದಂತಾಗಿದೆ.

