ಬಿಜೆಪಿಯವರಿಗೆ ಭಾರತದ ಬಹುತ್ವದ ಬಗ್ಗೆಯೂ ಗೌರವ ಇಲ್ಲ. ಇಂಡಿಯಾದ ಘನತೆಯೂ ಗೊತ್ತಿಲ್ಲ:ಸಿದ್ದು

ಬೆಂಗಳೂರು: ಬಹುತ್ವ ಭಾರತೀಯ ಸಂಸ್ಕೃತಿಯ ಜೀವಾಳ, ಇದೇ ಭಾರತದ ಮಣ್ಣಿನ ಸತ್ವ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಭಾರತದ ಬಹುತ್ವದ ನಾಶ ಎಂದರೆ ಅದು ನಮ್ಮ ಸಂವಿಧಾನದ ನಾಶ ಎಂದು ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯಸಭಾ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕಾರಣಿ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಅವರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಮಾತನಾಡಿದರು.

ಸಾವಿರಾರು ವರ್ಷಗಳ ಭಾರತದ ಬಹುತ್ವ ಸಂಸ್ಕೃತಿಯನ್ನು ನಾಶ ಪಡಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕಾಗಿ ಆಕರ್ಷಕ ಪದಗಳನ್ನು, ಘೋಷಣೆಗಳನ್ನು ಕೊಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಟೀಕಿಸಿದರು.

ಇದಕ್ಕೆ ಮರುಳಾದರೆ ಭಾರತದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಬೆಸುಗೆ ನಾಶವಾಗುತ್ತದೆ ಎಂದು ಎಚ್ಚರಿಸಿದರು.

ದೇಶದ ಹೆಸರನ್ನೇ ಈಗ ಬದಲಾಯಿಸುವ ಹುನ್ನಾರ ಮಾಡುತ್ತಾ ಡ್ರಾಮಾ ಆಡುತ್ತಿದ್ದಾರೆ. ತನ್ನ ಕಾರ್ಯಕ್ರಮಗಳಿಗೆ ಮೇಕ್ ಇನ್ ಇಂಡಿಯಾ , ಸ್ಕಿಲ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ ಅಂತೆಲ್ಲಾ ಹೆಸರಿಟ್ಟಿದ್ದ ಬಿಜೆಪಿ, ಕೇಂದ್ರ ಸರ್ಕಾರವೇ ಈಗ ಇಂಡಿಯ ಹೆಸರಿಗೆ ಬೆಚ್ಚಿ ಬಿದ್ದು ದೇಶದ ಹೆಸರು ಭಾರತ ಎಂದು ಹೊಸದಾಗಿ ಹೇಳಲು ಹೊರಟಿದೆ ಎಂದು ವ್ಯಂಗ್ಯವಾಡಿದರು.

ನಾವು ಭಾರತ್ ಜೋಡೋ ನಡೆಸಿದವರು ನಮಗೆ ಭಾರತ-ಇಂಡಿಯಾ ಬಗ್ಗೆ ಪಾಠ ಹೇಳುವ ಮೂರ್ಖತನಕ್ಕೆ ಬಿಜೆಪಿ ಪರಿವಾರ ಮುಂದಾಗಿದೆ. ಇವರಿಗೆ ಭಾರತದ ಬಗ್ಗೆಯೂ ಗೌರವ ಇಲ್ಲ. ಇಂಡಿಯಾದ ಘನತೆಯೂ ಗೊತ್ತಿಲ್ಲ ಎಂದು ಸಿದ್ದು ಕುಟುಕಿದರು.

ಭಾರತೀಯ ಬಹುತ್ವ ಸಂಸ್ಕೃತಿ ಕಾಂಗ್ರೆಸ್ ಕೈಯಲ್ಲಿ ಸುಭದ್ರವಾಗಿದೆ. ಭಾರತೀಯ ಸಂವಿಧಾನ ನಮ್ಮ ಕೈಯಲ್ಲಿ ಸುರಕ್ಷಿತವಾಗಿದೆ. ಯಾರು ಎಷ್ಟೆ ಹುನ್ನಾರ, ಪಿತೂರಿ ರಾಜಕಾರಣ ನಡೆಸಿದರೂ ನಾವು ಬಹುತ್ವದ ಭಾರತವನ್ನು, ಈ ಮಣ್ಣಿನ ಸೌಹಾರ್ದ ಪರಂಪರೆಯನ್ನು, ಜಾತ್ಯತೀತ ಸಂಸ್ಕೃತಿಯನ್ನು ಕಾಪಾಡಿಕೊಳ್ಳುತ್ತೇವೆ ಎಂದು ಹೇಳಿದರು.