ಒಳ್ಳೆಯ ಪುಸ್ತಕ ಜೀವನದ ನಿಜವಾದ ಸ್ನೇಹಿತ ಹಾಗೂ ಮಾರ್ಗದರ್ಶಿ: ರಾಜ್ಯಪಾಲ ಗೆಹ್ಲೋಟ್

ಬೆಂಗಳೂರು: ಮನುಷ್ಯನ ಜೀವನದಲ್ಲಿ ಪುಸ್ತಕಗಳು ಅತ್ಯುತ್ತಮ ಸಹಚರರಿದ್ದಂತೆ ಮಾರ್ಗದರ್ಶಿಯಾಗಿ ಹಾಗೂ ಜೀವನದ ಸ್ನೇಹಿತನಾಗಿರುತ್ತವೆ ಎಂದು ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಬೆಂಗಳೂರಿನ ಬಸವನಗುಡಿಯ ಡಾ. ಸಿ. ಅಶ್ವಥ್ ಕಲಾ ಭವನದಲ್ಲಿ ಆಯೋಜಿಸಲಾಗಿದ್ದ ಹಿರಿಯ ಪತ್ರಕರ್ತೆ ಮೇರಿ ಜೋಸೆಫ್ ಅವರು ಕನ್ನಡಕ್ಕೆ ಅನುವಾದ ಮಾಡಿರುವ ಗೋವಾದ ಗೌರವಾನ್ವಿತ ರಾಜ್ಯಪಾಲ ಶ್ರೀಧರನ್ ಪಿಳ್ಳೈ ಅವರ “ಗಿಳಿಯು ಬಾರದೇ ಇರದು” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುಸ್ತಕಗಳು ನಮಗೆ ಸ್ಫೂರ್ತಿ ನೀಡುತ್ತದೆ ಮತ್ತು ನಾವು ದುಃಖ ಮತ್ತು ಖಿನ್ನತೆಗೆ ಒಳಗಾದಾಗ ನಮಗೆ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ಹೇಳಿದರು.

ಒಳ್ಳೆಯ ಪುಸ್ತಕಗಳು ನಮ್ಮ ಮನಸ್ಸನ್ನು ಶಾಂತವಾಗಿಡಲು ಮತ್ತು ನಮ್ಮ ಆಲೋಚನೆಗಳನ್ನು ಪೋಷಿಸಲು ಸಹಾಯ ಮಾಡುತ್ತದೆ.

ಅಲ್ಲದೇ ಒಳ್ಳೆಯ ಪುಸ್ತಕಗಳು ಸ್ಫೂರ್ತಿ, ಜ್ಞಾನ, ನೈತಿಕ ಶಿಕ್ಷಣವನ್ನು ನೀಡುತ್ತವೆ ಮತ್ತು ಕೆಲವು ಪುಸ್ತಕಗಳು ಜನರ ಜೀವನದಲ್ಲಿ ಹೊಸ ತಿರುವು ತರುತ್ತವೆ.

ಹಾಗಾಗಿ, ಪ್ರತಿಯೊಬ್ಬರು ಜೀವನದಲ್ಲಿ ಒಳ್ಳೆಯ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಜೀವನದ ನಿಜವಾದ ಸ್ನೇಹಿತನನ್ನು ಕಂಡುಕೊಳ್ಳಬೇಕು ಎಂದು ರಾಜ್ಯಪಾಲರು ಕರೆ ನೀಡಿದರು.

ಗೋವಾ ರಾಜ್ಯಪಾಲರ ಪುಸ್ತಕ ಕನ್ನಡಕ್ಕೆ ಅನುವಾದವಾಗಿ ಬಿಡುಗಡೆಯಾಗಿರುವುದು ಸಂತಸ ತಂದಿದೆ ಎಂದರು.

ಮಲಯಾಳಂ ನ “ತತ್ತಾ ವರಾಧಿರಿಕ್ಕಿಲ್ಲಾ” ಎಂಬ ಪುಸ್ತಕವನ್ನು ಹಿರಿಯ ಪತ್ರಕರ್ತೆ ಮೇರಿ ಜೋಸೆಫ್ ಅವರು ಕನ್ನಡ ಭಾಷೆಯಲ್ಲಿ “ಗಿಳಿಯು ಬರದೇ ಇರದು” ಎಂದು ಅನುವಾದಿಸಿದ್ದಾರೆ.

ಈ ಪುಸ್ತಕದಲ್ಲಿ ಗ್ರಾಮೀಣ ಜೀವನ, ಜೀವನ ಮೌಲ್ಯಗಳು, ಮಾನವೀಯ ದೃಷ್ಟಿಕೋನವನ್ನು ಸಣ್ಣ ಕಥೆಗಳ ಮೂಲಕ ಅತ್ಯಂತ ಸರಳವಾಗಿ ಪ್ರಸ್ತುತಪಡಿಸಲಾಗಿದೆ.

ಶಶ್ರೀಧರನ್ ಪಿಳ್ಳೈ ಅವರು ರಾಜಕೀಯ, ಸಾಮಾಜಿಕ ಮತ್ತು ಕಾನೂನು ಸಮಸ್ಯೆಗಳು ಮತ್ತು ಕಾವ್ಯ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಇಂಗ್ಲಿಷ್ ಮತ್ತು ಅವರ ಮಾತೃಭಾಷೆ ಮಲಯಾಳಂನಲ್ಲಿ ಪ್ರಾವೀಣ್ಯತೆಯೊಂದಿಗೆ ಬರೆಯುತ್ತಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರದಲ್ಲಿ ಹಿರಿಯ ಪತ್ರಕರ್ತೆ ಮೇರಿ ಜೋಸೆಫ್ ಅನುವಾದಿಸಿರುವ ಗೋವಾ ರಾಜ್ಯಪಾಲರ ಪಿ ಎಸ್ ಶ್ರೀಧರನ್ ಪಿಳ್ಳೈ ಅವರ “ಗಿಳಿಯು ಬಾರದೇ ಇರದು” ಪುಸ್ತಕವನ್ನು ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ್ ಕಂಬಾರ್ ಅವರು ಬಿಡುಗಡೆಗೊಳಿಸಿದರು.

ಗೋವಾದ ರಾಜ್ಯಪಾಲರ ಪಿ. ಎಸ್. ಶ್ರೀಧರನ್ ಪಿಳ್ಳೈ, ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಸುದರ್ಶನ್, ಹಿರಿಯ ಪತ್ರಕರ್ತೆ ಮೇರಿ ಜೋಸೆಫ್, ಸಾಹಿತಿ ಶೋಭಾ ರಾವ್, ವೀರ ಲೋಕ ಪ್ರಕಾಶನ ಸಂಸ್ಥೆಯ ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.