ನಮ್ಮ ರೈತರ ಹಿತ ಕಡೆಗಣಿಸಿ ತಮಿಳು ನಾಡಿಗೆ ನೀರು ಹರಿಸುತ್ತಿಲ್ಲ; ಪ್ರಾಧಿಕಾರದ ಮಾತು ಮೀರಲಾಗದೆ ನೀರು ಬಿಡಲಾಗಿದೆ: ಸಿಎಂ ‌

ಮೈಸೂರು: ನಮ್ಮ ರಾಜ್ಯದ ರೈತರ ಹಿತವನ್ನು ಕಡೆಗಣಿಸಿ ತಮಿಳು ನಾಡಿಗೆ ನಾವು ನೀರನ್ನು ಹರಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಮುಖ್ಯಮಂತ್ರಿಗಳು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾವು ಸಂತೋಷದಿಂದ ತಮಿಳುನಾಡಿಗೆ ನೀರು ಬಿಡುತ್ತಿಲ್ಲ,ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿರುವುದರಿಂದ ನಾವು ತಮಿಳುನಾಡಿಗೆ ನೀರನ್ನ ಹರಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.

ನಮ್ಮ ರಾಜ್ಯದ ರೈತರ ಹಿತವನ್ನು ಕಡೆಗಣಿಸಿಲ್ಲ,ಅಥಾರಿಟಿ ಮಾತನ್ನು ಕೇಳಲೇಬೇಕಾಗಿರುವುದರಿಂದ ನಾವು ತಮಿಳುನಾಡಿಗೆ ನೀರನ್ನು ಬಿಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಎಂ ಬಿಜೆಪಿಯವರು ಸರ್ವ ಪಕ್ಷಗಳ ಸಭೆಯಲ್ಲಿ ಸರ್ಕಾರಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ಹೊರಗಡೆ ಬಂದು ನಮ್ಮ ಸರ್ಕಾರದ ವಿರುದ್ಧವೇ ಮಾತನಾಡಿ ಹೆಚ್ಚು ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದಾರೆ ಎಂದು ದೂರುತ್ತಾರೆ.

ಅವರ ಹಾಗೆ ನಾವು ರೈತರ ವಿಷಯದಲ್ಲಿ, ನೀರಿನ ವಿಷಯದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಗರಂ ಆದರು.

ಒಂದು ದೇಶ ಒಂದು ಚುನಾವಣೆ ಬಗ್ಗೆ ಕೇಳಲಾದ ಪ್ರಶ್ನೆಗೆ, ಇದು ಅಸಾಧ್ಯವಾದುದು ಇದನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಕೆಲವೇ ತಿಂಗಳಲ್ಲಿ ಸಂಸತ್ ಚುನಾವಣೆ ಬರುತ್ತದೆ.ಆ ವೇಳೆಗೆ ನಮ್ಮ ಸರ್ಕಾರವನ್ನು ಕಿತ್ತುಹಾಕಿ ಮತ್ತೊಂದು ಬಾರಿ ಚುನಾವಣೆ ಮಾಡಲು ಸಾಧ್ಯವೇ ಎಂದು ಸಿಎಂ ಪ್ರಶ್ನಿಸಿದರು.

ತಾಂತ್ರಿಕವಾಗಿಯೂ ಹಲವು ಸಮಸ್ಯೆಗಳಿವೆ ಹಾಗಾಗಿ ಇದನ್ನು ಜಾರಿಗೆ ತರುವುದು ಅಷ್ಟು ಸುಲಭ ಅಲ್ಲ ಎಂದು ತಿಳಿಸಿದರು.

ಬೆಂಗಳೂರು ಬಂದ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಭಟನೆ ಮಾಡಲು, ಬಂದ್ ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ಅವರಿಗೆ ನಾವು ಕಡಿವಾಣ ಹಾಕಲು ಆಗುವುದಿಲ್ಲ ಎಂದರು.

ಆದರೆ ಶಾಂತಿಯುತವಾಗಿ ಮಾಡಬೇಕೆಂದು ಹೇಳಿದರು.

ನಾನು ಹಾಗೂ ರಾಮಲಿಂಗರೆಡ್ಡಿ ಅವರು ಪ್ರತಿಭಟನಾಕಾರರೊಂದಿಗೆ ಮಾತನಾಡಿದ್ದೇವೆ, ಶಕ್ತಿ ಯೋಜನೆಯಿಂದ ತೊಂದರೆಯಾಗುತ್ತಿದೆ. ನಮಗೂ ಹಣ ನೀಡಿ ಎನ್ನುತ್ತಿದ್ದಾರೆ ಆದರೆ ಇದನ್ನು ಮಾಡಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮಹಿಷ ದಸರಾ ನಡೆಯಲು ಬಿಡುವುದಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರಲ್ಲಾ ಎಂದು ಮಾಧ್ಯಮದವರು ಗಮನ ಸೆಳೆದಾಗ ಅಂತವರಿಗೆಲ್ಲ ನಾನು ಉತ್ತರ ಕೊಡಲ್ಲ ಎಂದು ಕೋಪದಿಂದ ನುಡಿದರು.

ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಕೇಳಿದ ಪ್ರಶ್ನೆಗೆ, ಜೆಡಿಎಸ್ ನವರು ಕುಟುಂಬ ರಾಜಕಾರಣಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ,ಅಧಿಕಾರಕ್ಕಾಗಿ ಅವರು ಎಲ್ಲವನ್ನೂ ಮಾಡುತ್ತಾರೆ ಎಂದು ಸಿದ್ದು ಕಟುವಾಗಿ ಟೀಕಿಸಿದರು.

ಮೇಕೆದಾಟು ಬಗ್ಗೆ ತಮಿಳುನಾಡಿನವರು ಅನಗತ್ಯವಾಗಿ ತಕರಾರು ಮಾಡುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ ಎಂದು ತಿಳಿಸಿದರು.

ಮುಂದಿನ ಅಧಿವೇಶನದಲ್ಲಿ ಬರಪೀಡಿತ ತಾಲೂಕುಗಳ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.

62 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶವೆಂದು ಗುರುತಿಸಲಾಗಿದೆ. ಇನ್ನು 136 ತಾಲೂಕುಗಳ ಬಗ್ಗೆ ವರದಿ ಬರಬೇಕಿದೆ, ಆನಂತರ ಒಟ್ಟಿಗೆ ಇವೆರಡನ್ನು ಸೇರಿಸಿ ಮುಂದಿನ ಅಧಿವೇಶನದಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗುವುದು ಎಂದು ತಿಳಿಸಿದರು.

ಅಧಿಕಾರ ಇರಲಿ ಇಲ್ಲದಿರಲಿ ಯಾವುದೇ ಕಾರಣಕ್ಕೂ ನಾನು ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು

ಕೋಮುವಾದಿಗಳ ವಿರುದ್ಧ ನಾನು ಮೊದಲಿನಿಂದ ಹೋರಾಟ ನಡೆಸುತ್ತಲೇ ಬಂದಿದ್ದೇನೆ. ಹಾಗಾಗಿ ಕೋಮುವಾದಿ ಪಕ್ಷದೊಂದಿಗೆ ನಾನು ಯಾವುದೇ ಕಾರಣಕ್ಕೂ ಕೈಜೋಡಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.