ಅಧಿಕಾರಿಗಳು ಕಚೇರಿಯಲ್ಲೇ ಇರಬೇಕು;ವರ್ಕ್ ಫ್ರಮ್ ಹೋಂಗೆ ಅವಕಾಶ ಇಲ್ಲ- ಸಿದ್ದರಾಮಯ್ಯ ಕಡಕ್ ಎಚ್ಚರಿಕೆ

ಬೆಂಗಳೂರು: ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅಧಿಕಾರಿಗಳು ಮನೆಯಿಂದ ಕೆಲಸ ಮಾಡಬಾರದು, ಕಚೇರಿಯಲ್ಲೇ ಇದ್ದು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಡಕ್ ಎಚ್ಚರಿಕೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಸಿಎಂ ಈ ರೀತಿ ಸೂಚನೆ ನೀಡಿದರು.

ಅಧಿಕಾರಿಗಳು ಕೇಂದ್ರಸ್ಥಾನದಲ್ಲಿಯೇ ವಾಸವಿದ್ದು, ಸದಾ ಜನರ ಸೇವೆಗೆ ಲಭ್ಯರಿರಬೇಕು,ಕಚೇರಿಯಲ್ಲೇ ಇರಬೇಕು, ಇಲ್ಲಾ ಪ್ರವಾಸದಲ್ಲಿರಬೇಕು.

ವರ್ಕ್ ಫ್ರಮ್ ಹೋಂಗೆ ಅವಕಾಶ ಇಲ್ಲ, ಜನರಿಗೆ ತೊಂದರೆಯಾಗುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದರು

ಅಧಿಕಾರಿಗಳು ದೂರವಾಣಿ ಕರೆಗೆ ಸಿಗುವುದಿಲ್ಲ ಎಂಬ ದೂರುಗಳು ಸಾರ್ವಜನಿಕರು, ಶಾಸಕರು ಮತ್ತು ಮಂತ್ರಿಗಳಿಂದ ಬಂದಿವೆ,ಇದು ಒಳ್ಳೆಯದಲ್ಲ.

ಮುಖ್ಯಮಂತ್ರಿ ಕಚೇರಿಯಿಂದ ಇರಲಿ, ಸಚಿವರಿರಲಿ, ಶಾಸಕರಿರಲಿ, ಜನಸಾಮಾನ್ಯರಿರಲಿ, ಅವರ ಕರೆಗಳಿಗೆ ನೀವು ಸ್ಪಂದಿಸಬೇಕು. ಯಾವುದೇ ಪಕ್ಷದ ಶಾಸಕರುಗಳಿರಲಿ ಪ್ರೋಟೋಕಾಲ್ ಚಾಚೂ ತಪ್ಪದೆ ಪಾಲಿಸಬೇಕು ಎಂದು ಸೂಚಿಸಿದರು.

ಅಧಿಕಾರಿಗಳ ಹೃದಯ ಸರಿಯಾಗಿ ಕೆಲಸ ಮಾಡಬೇಕು. ಮನುಷ್ಯತ್ವ ಇಲ್ಲದವರು ಸಾರ್ವಜನಿಕ ಸೇವೆಗೆ ಬರಲೇಬಾರದು, ನಿಮ್ಮ ನಿರ್ಲಕ್ಷ್ಯ ಮತ್ತು ಉಡಾಫೆತನದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ಸುಮ್ಮನೆ ಕೂರುವುದಿಲ್ಲ ಎಂದು ಕಠಿಣವಾಗಿ ಸಿಎಂ ನುಡಿದರು.

ರಾಜ್ಯದಲ್ಲಿ 251ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ,174 ಪ್ರಕರಣಗಳು ಮಾತ್ರ ಇತ್ಯರ್ಥವಾಗಿದೆ. ಉಳಿದ ಪ್ರಕರಣಗಳನ್ನೂ ಶೀಘ್ರ ವಿಲೇವಾರಿ ಮಾಡಿ, ಪರಿಹಾರ ವಿತರಿಸಿ ಎಂದು ಆದೇಶಿಸಿದರು.

ಬರ ಘೋಷಣೆಯಾದ ನಂತರ ಖಾಸಗಿ ಲೇವಾದೇವಿದಾರರ ಮೇಲೆ ನಿಗಾ ಇಡಬೇಕು. ಬ್ಯಾಂಕುಗಳು ರೈತರಿಗೆ ಕಿರುಕುಳ ಕೊಡದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಅಧಿಕಾರಿಗಳಿಗೆ ಸೌಲಭ್ಯ ನೀಡುವುದು, ಜನರ ಸಮಸ್ಯೆಗೆ ಸ್ಪಂದಿಸಿ ಉತ್ತಮವಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ.
ನೀವು ಚೆನ್ನಾಗಿ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಕೆಲಸ ಮಾಡದಿದ್ದರೆ ಕೆಟ್ಟ ಹೆಸರು ಬರುತ್ತದೆ. ಅದಕ್ಕೋಸ್ಕರ ನಿಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಆರೋಗ್ಯ ಇಲಾಖೆಯಲ್ಲಿ ವೈದ್ಯರು ಲಭ್ಯವಿರುವುದಿಲ್ಲ. ಅರೆ ವೈದ್ಯಕೀಯ ಸಿಬ್ಬಂದಿಯೇ ವೈದ್ಯರ ಪಾತ್ರ ನಿರ್ವಹಿಸುವುದು, ಔಷಧ ಪ್ರಿಸ್ಕ್ರಿಪ್ಷನ್‌ ಬರೆಯುವುದು ಇವೆಲ್ಲ ಆಗಬಾರದು. ವೈದ್ಯರು ತಮ್ಮ ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ಹಾಸ್ಟೆಲುಗಳು, ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಜಿಲ್ಲಾಧಿಕಾರಿಗಳು ಅಧೀನ ಕಚೇರಿಗಳಿಗೆ ಭೇಟಿ ನೀಡಬೇಕು ಎಂದು ಸಿಎಂ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಸ್ಟೆಲುಗಳು, ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಜಿಲ್ಲಾಧಿಕಾರಿಗಳು ಅಧೀನ ಕಚೇರಿಗಳಿಗೆ ಭೇಟಿ ನೀಡಬೇಕು