ಚೈತ್ರ ಕುಂದಾಪುರ ಹಿಂದೂ ಕಾರ್ಯಕರ್ತೆ ಎಂಬ ಕಾರಣಕ್ಕೆ ಬಂಧಿಸಿಲ್ಲ- ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ಚೈತ್ರ ಕುಂದಾಪುರ ಅವರನ್ನು ಹಿಂದೂ ಕಾರ್ಯಕರ್ತೆ ಅಥವಾ ಬಿಜೆಪಿ ನಾಯಕಿ ಎಂದುಕೊಂಡೇನೂ ಬಂಧಿಸಿಲ್ಲ, ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಲಾಗಿದೆ ಎಂದು ನೀಡಲಾದ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡಿಲ್ಲ, ಬಿಜೆಪಿಯವರು ಅಥವಾ ಹಿಂದೂ ಸಂಘಟನೆಯವರು ಎಂಬ ಕಾರಣಕ್ಕಾಗಿ ಬಂಧಿಸಿದ್ದಲ್ಲ. ದೂರು ಬಂದಿದೆ ಅದರ ಆಧಾರದ ಮೇಲೆ ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ತಪ್ಪು ಮಾಡಿಲ್ಲದಿದ್ದರೆ ಭಯ ಏಕೆ ಎಂದು ಪ್ರಶ್ನಿಸಿದರು.

ತನಿಖೆಯ ನಂತರ ಎಲ್ಲವೂ ಹೊರಬರುತ್ತದೆ. ಅಲ್ಲಿವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಚೈತ್ರ ಕುಂದಾಪುರ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ ಒಂದೂವರೆ ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ದೂರು ಬಂದಿದೆ. ಅದಕ್ಕೆ ಸೀಮಿತವಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

ತನಿಖೆ ಹಂತದಲ್ಲಿ ಎಲ್ಲವೂ ಪರಿಶೀಲನೆ ಆಗಲಿದೆ. ಸ್ವಾಮಿಜಿಯವರ ಪಾತ್ರ, ಇತರರ ಪಾತ್ರ ಎಲ್ಲವೂ ಹೊರಬರುತ್ತದೆ. ಹೇಳಿಕೆಗಳನ್ನು ಪಡೆದಾಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರೇ ವ್ಯಕ್ತಿಗಳಿದ್ದರೂ ಅವರನ್ನೂ ತನಿಖೆಗೊಳಪಡಿಸಲಾಗುವುದು ಎಂದು ಹೇಳಿದರು.

ಇದಕ್ಕೆ ಧರ್ಮ ಅಥವಾ ಪಕ್ಷದ ಬಣ್ಣ ಬಳಿಯುವುದು ಸರಿಯಲ್ಲ. ಆಕೆ ಹಿಂದೂ ಸಮಾವೇಶಗಳಲ್ಲಿ ಮಾತನಾಡಿರುವುದು ಅಥವಾ ಇನ್ನಾವುದೇ ವಿಚಾರಗಳನ್ನು ನಾವು ಮಿಶ್ರಣ ಮಾಡಲು ಬಯಸುವುದಿಲ್ಲ. ಆ ವಿಚಾರಗಳೇ ಬೇರೆ ಎಂದು ಹೇಳಿದರು.

ಇಂದಿರಾ ಕ್ಯಾಂಟಿನ್‍ನಲ್ಲಿ ಗೋಪಾಲ ಪೂಜಾರಿ ಬಿಲ್ ಬಾಕಿ ಇರುವ ಕಾರಣಕ್ಕಾಗಿ ಷಡ್ಯಂತ್ರ ಮಾಡಲಾಗಿದೆ ಎಂಬ ಚೈತ್ರ ಕುಂದಾಪುರ ಅವರ ಆರೋಪ ಆಧಾರರಹಿತ ಈ ಪ್ರಕರಣಕ್ಕೂ, ಅದಕ್ಕೂ ಸಂಬಂಧವಿಲ್ಲ ಎಂದು ಪರಮೇಶ್ವರ್ ತಿಳಿಸಿದರು.