ರೈತರನ್ನು ಆತ್ಮಹತ್ಯೆಗೆ ದೂಡುವುದು ಕರ್ನಾಟಕದ ಮಾದರಿಯೇ: ರಾಜ್ಯ ಸರಕಾರದ ವಿರುದ್ಧ ಹೆಚ್.ಡಿ.ಕೆ ಗರಂ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ,ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ರೈತರನ್ನು ಆತ್ಮಹತ್ಯೆಗೆ ದೂಡುವುದು ಕರ್ನಾಟಕದ ಮಾದರಿಯೇ ಎಂದು ಪ್ರಶ್ನಿಸಿದ್ದಾರೆ.

ಬೆಳ್ಳಂ ಬೆಳಗ್ಗೆಯೇ ಆತ್ಮಹತ್ಯೆ ವರದಿ ಓದಿ ಬಹಳ ಸಂಕಟವಾಯಿತು, ಕಣ್ಣಾಲಿಗಳು ತುಂಬಿ ಬಂದವು. ಇನ್ನೆಷ್ಟು ದಿನ ಇಂತಹ ಸಾವುಗಳನ್ನು ನೋಡಬೇಕು. ಕೇವಲ ಪ್ರಚಾರ, ಅಧಿಕಾರದ ಸುಖ ಅನುಭವಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಗ್ಯಾರಂಟಿಗಳನ್ನು ಕೊಟ್ಟೆವೆಂದು ಬೀಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ, ಇದೇನಾ ಕರ್ನಾಟಕ ಮಾದರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ‌

ರಾಜ್ಯದಲ್ಲಿ ಕೃಷಿ ಇಲಾಖೆ ಇದೆಯಾ, ಅದು ಕೃಷಿ ಇಲಾಖೆಯಾ ಅಥವಾ ಕಸಾಯಿಖಾನೆಯಾ, ಕಂದಾಯಕ್ಕೂ ಆದಾಯದ ಚಿಂತೆಯಾ, ರಾಜ್ಯಕ್ಕೆ ಬರ, ಕೆಲವರಿಗೆ ಅದೇ ವರ ಇದು ನೈಜಸ್ಥಿತಿ ಎಂದು ಕಿಡಿಕಾರಿದ್ದಾರೆ.

ಆಗಸ್ಟ್, ಸೆಪ್ಟೆಂಬರ್ ನಲ್ಲಿ ಕೆಲವೆಡೆ ಮಳೆಯಾದರೂ ಪ್ರಯೋಜನವಾಗಿಲ್ಲ, ಬೆಳೆಗಳು ನಾಶವಾಗಿವೆ. ತುರ್ತಾಗಿ ಕೇಂದ್ರಕ್ಕೆ ಮನವಿ ಮಾಡಬೇಕಿದ್ದ ಸರಕಾರ ಮಾರ್ಗಸೂಚಿ ನೆಪದಲ್ಲಿ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಬೆಳೆ ವಿಮೆಯೂ ಅನ್ನದಾತರ ಆಪತ್ತಿಗೆ ಆಗುತ್ತಿಲ್ಲ,ಅದರ ಬಗ್ಗೆ ಅವರಿಗೆ ವಿಶ್ವಾಸವೇ ಇಲ್ಲ. ಅವರು ಸಾವಿನ ದವಡೆಗೆ ಬೀಳುತ್ತಿದ್ದರೆ ಅಧಿಕಾರಿಗಳು ಅರ್ಹ-ಅನರ್ಹ ಸಾವು ಎಂದು ವಿಭಜಿಸಿ ಲೆಕ್ಕ ಹಾಕಿಕೊಂಡು ಕೂತಿದ್ದಾರೆ ಎಂದು ಬೇಸರ ಕಟ್ಟಿದ್ದಾರೆ.

ರೈತರು ಎದೆಗುಂದಬಾರದು. ನಿಮ್ಮ ದುಡುಕಿನ ನಿರ್ಧಾರ ನಿಮ್ಮ ಕುಟುಂಬವನ್ನು ಅನಾಥಗೊಳಿಸುತ್ತದೆ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಸರಕಾರ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಇತಿಶ್ರೀ ಹಾಡಲೇಬೇಕು. ಶಾಶ್ವತವಾಗಿ ಪರಿಹಾರೋಪಾಯ ಕಂಡುಕೊಳ್ಳಬೇಕು, ರೈತ ಕುಟುಂಬಗಳಿಗೆ ತಕ್ಷಣ ಮಾನವೀಯತೆಯ ನೆರವು ಕೊಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.