ಬೆಂಗಳೂರು: ಕೇಂದ್ರದ ಮೋದಿ ಸರ್ಕಾರದ ಮಹಿಳಾ ಮೀಸಲಾತಿ ಮಸೂದೆ ಮಂಡನೆ ವಿಚಾರವನ್ನು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸ್ವಾಗತಿಸಿದ್ದಾರೆ
ಜತೆಗೆ ಎಚ್ ಡಿ ದೇವೇಗೌಡರ ಕನಸು ಈಗ ನನಸಾಗುತ್ತಿದೆ ಎಂದು ಹೇಳಿದ್ದಾರೆ.
ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆ ಆಗುತ್ತಿರುವುದನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿಯೇ 1996 ಸೆಪ್ಟೆಂಬರ್ 12ರಂದು ರಾಜ್ಯಸಭೆಯಲ್ಲಿ ಈ ಐತಿಹಾಸಿಕ ಬಿಲ್ ಅನ್ನು ಮಂಡಿಸಲಾಗಿತ್ತು.
ಆದರೆ, ಅವರ ಸಂಯುಕ್ತರಂಗ ಸರಕಾರದ ಮೈತ್ರಿಕೂಟದ ಕೆಲ ಮಿತ್ರಪಕ್ಷಗಳೇ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಆ ಮಸೂದೆ ಅಂಗೀಕಾರ ಆಗಲಿಲ್ಲ ಎಂದು ಹೇಳಿದ್ದಾರೆ.
ಇವತ್ತು ಕಾಂಗ್ರೆಸ್ಸಿನ I.N.D.I.A. ಮೈತ್ರಿಕೂಟವನ್ನು ಸೇರಿಕೊಂಡಿರುವ ನಾಯಕರೇ ಅಂದು ಈ ಮಸೂದೆಗೆ ತಡೆ ಒಡ್ಡಿದ್ದರು.
27 ವರ್ಷಗಳ ನಂತರ ಎಚ್ ಡಿ ದೇವೇಗೌಡರ ಕನಸಿಗೆ ಮರುಜೀವ ಬಂದಿರುವುದು ನನಗೆ ಸಂತೋಷ ಉಂಟು ಮಾಡಿದೆ.
1995ರಲ್ಲಿ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ನೀಡಿ, ಅಧಿಕಾರ ನಡೆಸುವ ಹಕ್ಕು ಕಲ್ಪಿಸಿ ಮಹಿಳಾ ಸಬಲೀಕರಣದ ಸುವರ್ಣ ಅಧ್ಯಾಯಕ್ಕೆ ನಾಂದಿ ಹಾಡಿದ್ದರು ಎಂದು ಕುಮಾರಸ್ವಾಮಿ ನೆನಪು ಮಾಡಿದ್ದಾರೆ.
ಅಂದು ನಮ್ಮ ರಾಜ್ಯದಲ್ಲಿ ಘಟಿಸಿದ ಈ ಕ್ರಾಂತಿಕಾರಿ ವಿದ್ಯಮಾನವನ್ನು ಇಡೀ ದೇಶವೇ ಬೆರಗು ಕಂಗಳಿಂದ ನೋಡಿತ್ತು.
ಇಂದು ಮಹಿಳಾ ಮೀಸಲು ಮಸೂದೆ ಲೋಕಸಭೆಯಲ್ಲಿ ಅಂಗೀಕಾರ ಆಗುವುದು ಖಚಿತವಾಗಿದ್ದು, ಈ ಮೂಲಕ ಮಾಜಿ ಪ್ರಧಾನಿಗಳ ಕನಸು ನನಸಾಗುತ್ತಿದೆ.
ಮಹಿಳೆಯರಿಗೆ ಸಮಾನ ಹಕ್ಕು, ಅವಕಾಶಗಳನ್ನು ಕಲ್ಪಿಸುವುದು ಇಂದಿನ ತುರ್ತು. ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿ ಅವರು, ಮತ್ತವರ ಸಂಪುಟ ಕೈಗೊಂಡ ನಿರ್ಧಾರ ಶ್ಲಾಘನೀಯ ಎಂದು ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

