ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ಯು.ಟಿ.ಖಾದರ್

ಮೈಸೂರು: ಮೈಸೂರಿನ ಸರಸ್ವತಿಪುರದಲ್ಲಿರುವ ಶ್ರೀ ಕೃಷ್ಣ ಧಾಮಕ್ಕೆ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಭೇಟಿ ನೀಡಿ ಚಾತುರ್ಮಾಸ್ಯ ವ್ರತದಲ್ಲಿರುವ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಈ ವೇಳೆ ಶ್ರೀ ಗಳಿಗೆ ಗಂಧದ ಹಾರ ಸಮರ್ಪಿಸಿ ಶಾಲು ಹೊದಿಸಿ ಪೇಟ ತೋಡಿಸಿ ಖಾದರ್ ನಮಸ್ಕರಿಸಿದರು.

ನಂತರ ಸ್ವಾಮೀಜಿಯವರು ಕೂಡ ಯು.ಟಿ ಖಾದರ್ ಅವರಿಗೆ ಉಡುಪಿ ಕೃಷ್ಣನ ಮೂರ್ತಿಯನ್ನು ನೀಡಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯು.ಟಿ.ಖಾದರ್ ಮೈಸೂರು ಜಿಲ್ಲೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ನಾನು ಚಾತುರ್ಮಾಸ್ಯ ವ್ರತದಲ್ಲಿರುವ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದು ತಿಳಿಸಿದರು.

ಸಮಗ್ರ ಏಕತೆ, ಸಮಗ್ರ ಸೋದರತೆ, ಸಮಸ್ತ ಕರ್ನಾಟಕದ ಅಭಿವೃದ್ಧಿ ಮತ್ತು ಬಲಿಷ್ಠ ಭಾರತಕ್ಕಾಗಿ ಸ್ವಾಮೀಜಿಯವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ಯುಟಿ ಖಾದರ್ ಅವರನ್ನು ಆಶೀರ್ವದಿಸಿದ ನಂತರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಮಾತನಾಡಿ ನಾವು 36ನೇ ಚಾತುರ್ಮಾಸ ವ್ರತದಲ್ಲಿರುವಾಗ ನನಗೆ ಅತಿ ಪ್ರಿಯರಾದ ಯು.ಟಿ ಖಾದರ್ ಅವರು ಇಲ್ಲಿಗೆ ಬಂದಿರುವುದು ನನಗೆ ಅತ್ಯಂತ ಸಂತಸ ತಂದಿದೆ ಎಂದು ಹೇಳಿದರು.

ಅವರು ಕರ್ನಾಟಕ ಸರ್ಕಾರವನ್ನು ಚೆನ್ನಾಗಿ ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ನಾಡಿನಲ್ಲಿ ಕಾವೇರಿ ಸಮಸ್ಯೆ ಅತಿ ಹೆಚ್ಚಾಗಿ ಕಾಡುತ್ತಿದೆ ಇಲ್ಲೇ ಕುಡಿಯಲು ನೀರಿಲ್ಲ ಆದರೆ ಅತ್ತ ನೀರು ಬಿಡಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಕರ್ನಾಟಕಕ್ಕೆ ನೆಮ್ಮದಿ ಶಾಂತಿ ಸಿಗಬೇಕು ಸಮಸ್ಯೆ ಪರಿಹಾರ ಆಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಅಬ್ದುಲ್ , ಮುಖಂಡರಾದ ಸುಶ್ರುತ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮಂಚೇಗೌಡನ ಕೊಪ್ಪಲ್ ರವಿ, ಪ್ರದೀಪ್ ಗೌಡ ,ವಿನಯ್ ಕಣಗಾಲ್, ಕೃಷ್ಣದಾಸ್ ಪುರಾಣಿಕ್, ರವಿ ಶಾಸ್ತ್ರಿ, ಲತಾ ಮೋಹನ್,ಮತ್ತಿತರ ಮುಖಂಡರು ಹಾಜರಿದ್ದರು.