ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವರ್ಚಸ್ಸು ಕಳೆದುಕೊಂಡಿದೆ. ಹೀಗಾಗಿ ಮತ್ತೆ ಆಪರೇಶನ್‌ಗೆ ಮುಂದಾಗಿದೆ ಇದು ಆ ಪಕ್ಷದ ವೀಕ್‌ನೆಸ್ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಬಿಜೆಪಿ ಮಾಜಿ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿರು ವಿಚಾರ ಕುರಿತು ಗುರುವಾರ ಮಾಧ್ಯಮ ದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಟಿಕೆಟ್ ಸಿಗದೇ ಇದ್ದ ಕೆಲವರು ಕಾಂಗ್ರೆಸ್‌ಗೆ ಹೋಗುತ್ತಾರೆ. ಅದರಿಂದ ಕಾಂಗ್ರೆಸ್‌ಗೆ ಯಾವುದೇ ಲಾಭವಿಲ್ಲ ಎಂದು ಟಾಂಗ್ ನೀಡಿದರು.
ನಮ್ಮಲ್ಲಿ ಟಿಕೆಟ್ ಸಿಗದೇ ಇದ್ದವರು ಬೇರೆ ಕಡೆ ಹೋಗೋದು ಸಹಜ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಬರಗಾಲ ಇದೆ, ಮುಂಗಾರು ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಆದರೆ ಬೆಳೆ ಪರಿಹಾರಕ್ಕೆ ಸರ್ಕಾರ ಮುಂದಾಗಿಲ್ಲ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಪ್ರವಾಹ ಬಂದಾಗ ನಾವು ರೈತರಿಗೆ ಎರಡು ಪಟ್ಟು ಪರಿಹಾರ ನೀಡಿದ್ದೇವೆ. ಆದರೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತಲೇನೆ ಕೆಡಿಸಿಕೊಂಡಿಲ್ಲ ಎಂದು ದೂರಿದರು.

