ಬೆಂಗಳೂರು: ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡುವಂತಹ ವಾತಾವರಣ, ಕನ್ನಡದ ಅನಿವಾರ್ಯತೆಯನ್ನು ಸೃಷ್ಟಿಸುವ ಅತ್ಯಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೊಜಿಸಿದ್ದ ಕರ್ನಾಟಕ ಸಂಭ್ರಮ 50- ರ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದರು.
ನಾವೆಲ್ಲರೂ ಕನ್ನಡಿಗರು, ಕರ್ನಾಟಕದ ಏಕೀಕರಣವಾದಾಗಿನಿಂದ ವಿವಿಧ ಭಾಷೆಗಳನ್ನು ಮಾತನಾಡುವ ಜನರು ಕನ್ನಡ ನಾಡಿನಲ್ಲಿ ನೆಲೆಸಿದ್ದಾರೆ. ಈ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆ ಮಾತನಾಡುವುದನ್ನು ಕಲಿಯಬೇಕು ಎಂದು ಹೇಳಿದರು.
ತಮಿಳುನಾಡು, ಕೇರಳ, ತೆಲಂಗಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ ಅಲ್ಲಿನ ಭಾಷೆ ಕಲಿಯದೇ ಕನ್ನಡ ಮಾತನಾಡಿಕೊಂಡು ಬದುಕಲು ಸಾಧ್ಯವಿಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡ ಬಾರದೇ ಇದ್ದರೂ ಬದುಕಬಹುದು,ಇದೇ ನಮ್ಮ ರಾಜ್ಯಕ್ಕೂ ಹಾಗೂ ಪಕ್ಕದ ರಾಜ್ಯಗಳಿಗೂ ಇರುವ ವ್ಯತ್ಯಾಸ ಎಂದು ತಿಳಿಸಿದರು.
ಕರ್ನಾಟಕದ ಏಕೀಕರಣವಾಗಿ 68 ವರ್ಷಗಳು ಸಂದರೂ ರಾಜ್ಯದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗದಿರುವುದು ಸರಿಯಲ್ಲ, ಕನ್ನಡಿಗರು ನಮ್ಮ ಭಾಷೆಯನ್ನು ಬೇರೆಯವರಿಗೆ ಕಲಿಸುವ ಬದಲು ಅವರ ಭಾಷೆಯನ್ನೇ ನಾವು ಮೊದಲು ಕಲಿಯುತ್ತಿದ್ದೇವೆ.
ಕನ್ನಡಿಗರ ಈ ವರ್ತನೆ ಭಾಷಾ ಬೆಳವಣಿಗೆ ಹಾಗೂ ನಾಡು, ನುಡಿ, ಸಂಸ್ಕೃತಿ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಮುಖ್ಯ ಮಂತ್ರಿ ತಿಳಿಸಿದರು.
ರಾಜ್ಯದ ಕೆಲವು ಭಾಗಗಳಲ್ಲಿ ಪರಭಾಷಿಗರು ಕನ್ನಡವನ್ನು ಮಾತನಾಡುವುದೇ ಇಲ್ಲ. ಕನ್ನಡಿಗರು ಅಭಿಮಾನ ಶೂನ್ಯರಲ್ಲ,ಆದರೆ ಹೆಚ್ಚಿನ ಉದಾರತೆಯಿಂದಾಗಿ ಈ ರೀತಿ ಆಗಿದೆ, ಬೇರೆ ಭಾಷಿಗರನ್ನು , ಧರ್ಮದವರನ್ನೂ ಪ್ರೀತಿಸಬೇಕು ಆದರೆ ನಮ್ಮ ಭಾಷೆಯನ್ನು ಮರೆಯಬಾರದು ಎಂದು ಕಡಕ್ಕಾಗಿ ಹೇಳಿದರು.
ನಮ್ಮಲ್ಲಿ ಇಂಗ್ಲೀಷ್ ವ್ಯಾಮೋಹವೂ ಹೆಚ್ಚಾಗಿದೆ. ನನ್ನ ಮಂತ್ರಿಮಂಡಲದ ಹಲವರು ಹಾಗೂ ವಿಶೇಷವಾಗಿ ಅಧಿಕಾರಿಗಳು ಕಡತಗಳಲ್ಲಿ ಇಂಗ್ಲೀಷ್ ನಲ್ಲಿಯೇ ಟಿಪ್ಪಣಿಯನ್ನು ಬರೆಯುತ್ತಾರೆ.
ಕೇಂದ್ರ ಸರ್ಕಾರಕ್ಕೆ ಹಾಗೂ ಇತರೆ ರಾಜ್ಯಗಳಿಗೆ ಬರೆಯುವ ಸಂದರ್ಭದಲ್ಲಿ ಇಂಗ್ಲೀಷ್ ಬಳಸಬಹುದೇ ಹೊರತು ಉಳಿದಂತೆ ಕನ್ನಡದಲ್ಲಿಯೇ ವ್ಯವಹರಿಸಬೇಕು.
ಬಹಳ ವರ್ಷಗಳಿಂದ ಕನ್ನಡ ಆಡಳಿತ ಭಾಷೆಯಾಗಿದ್ದರೂ ಇದು ಪಾಲನೆಯಾಗದಿರುವುದಕ್ಕೆ ನಿರ್ಲಕ್ಷ್ಯವೂ ಕಾರಣ ಈ ಪರಿಸ್ಥಿತಿ ಸುಧಾರಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು
ದೇವರಾಜ ಅರಸು ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 1973, ನವೆಂಬರ್ 01, ರಂದು ಕರ್ನಾಟಕ ಎಂದು ಮರುನಾಮಕರಣವಾಯಿತು. ಕರ್ನಾಟಕ ಗತವೈಭವ ಎಂಬ ಆಲೂರು ವೆಂಕಟರಾಯರ ಪುಸಕ್ತದಿಂದ ಆಯ್ದು ಅಖಂಡ ಕರ್ನಾಟಕಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ವಿವರಿಸಿದರು.
ಹಿಂದಿನ ಸರ್ಕಾರ ಆಚರಿಸಬೇಕಿತ್ತು:
ನವೆಂಬರ್ 01, 2023 ಕ್ಕೆ 50 ವರ್ಷಗಳು ತುಂಬುತ್ತದೆ. ವಾಸ್ತವವಾಗಿ ಕಳೆದ ವರ್ಷವೇ ಇದನ್ನು ಆಚರಿಸಬೇಕಿತ್ತು. ಆದರೆ ಹಿಂದಿನ ಸರ್ಕಾರದವರು ಮಾಡಿಲ್ಲ.
ಈ ಬಾರಿಯ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಇದೊಂದು ಮಹತ್ವದ ಘಟನೆ. ಇದನ್ನು ವಿಶೇಷವಾಗಿ ಆಚರಿಸದೇ ಹೋದರೆ ಲೋಪವಾಗುತ್ತದೆ ಎಂದು ತೀರ್ಮಾನಿಸಿ, ಬಜೆಟ್ ನಲ್ಲಿ ಘೋಷಣೆ ಮಾಡಿ 2023 ನವೆಂಬರ್ 1 ರಿಂದ 2024 ನವೆಂಬರ್ 1 ರವರೆಗೆ ವರ್ಷವಿಡೀ ಕರ್ನಾಟಕ ಸಂಭ್ರಮವನ್ನು ಆಚರಿಸಲಾಗುತ್ತಿದೆ ಎಂದು ಸಿಎಂ ಹೇಳಿದರು.
ಲಾಂಛನದ ವಿನ್ಯಾಸಕ್ಕೆ ಮೆಚ್ಚುಗೆ:
ಕರ್ನಾಟಕ ಸಂಭ್ರಮ- 50 ಲಾಂಛನದ ವಿನ್ಯಾಸ ಉತ್ತಮವಾಗಿದೆ, ಅದನ್ನು ವಿನ್ಯಾಸಗೊಳಿಸಿದ ರವಿರಾಜ್.ಜಿ.ಹುಲಗೂರು ಅವರನ್ನು ಸಿದ್ದರಾಮಯ್ಯ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

