ಬೆಂಗಳೂರು: ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಚಿವಾಲ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಾಲ್ಮೀಕಿ ಜಯಂತಿಯ ಅಂಗವಾಗಿ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.
ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಬೆಳಗಾವಿಯ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿಡುವ ತೀರ್ಮಾನವನ್ನು ಕೈಗೊಂಡಿದ್ದೆವು ಎಂದು ಹೇಳಿದರು.
ಆದಕಾರಣ ಎಸ್ ಸಿ, ಎಸ್ ಟಿ ಹಾಗೂ ಟಿಎಸ್ ಪಿ ಯೋಜನೆಯಡಿ ಹೆಚ್ಚು ಅನುದಾನ ಖರ್ಚು ಮಾಡಲು ಸಾಧ್ಯವಾಯಿತು. ಮೊದಲು ಈ ಯೋಜನೆಗಳಡಿ ಕೇವಲ 6 ಸಾವಿರ ಅನುದಾನ ಮೀಸಲಿಡಲಾಗುತ್ತಿತ್ತು.
ಆದರೆ ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಈ ಮೊತ್ತವನ್ನು 6 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಿಗೆ ಮಾಡಲಾಯಿತು. ಹಿಂದಿನ ಸರ್ಕಾರದವರು ಈ ಮೊತ್ತವನ್ನು ಹೆಚ್ಚಿಸಲಿಲ್ಲ. ನಮ್ಮ ಸರ್ಕಾರ ಈ ವರ್ಷದ ಆಯವ್ಯಯದಲ್ಲಿ ಈ ವರ್ಗಗಳಿಗೆ 34 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ ಎಂದು ತಿಳಿಸಿದರು.
2011ರ ಜನಗಣತಿ ಪ್ರಕಾರ, ಶೇ.24.1 ರಷ್ಟು ಎಸ್ ಸಿ ಹಾಗೂ ಎಸ್ ಟಿ ವರ್ಗದ ಜನಸಂಖ್ಯೆಯಿದೆ. ಈ ಜನಸಂಖ್ಯೆಗನುಗುಣವಾಗಿ ಎಸ್ ಸಿ ಎಸ್ ಟಿ ವರ್ಗಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡುವ ಬಗ್ಗೆ ಕಾನೂನು ತಂದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಿದೆ ಎಂದು ಸಿಎಂ ಹೇಳಿದರು.
ಈ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 8 ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು, ಕನ್ನಡ ನಾಡಿನ ಜನತೆಯ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ,ಪ್ರಶಸ್ತಿ ಪುರಸ್ಕೃತ ರ ಸಾಧನೆಗಳು ಎಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ರಾಜನಹಳ್ಳಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸಂನಾನಂದಪುರಿ ಸ್ವಾಮೀಜಿ ವಹಿಸಿದ್ದರು.
ಸಚಿವರಾದ ಡಾ: ಹೆಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಉಗ್ರಪ್ಪ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

