ತಕ್ಷಣದಿಂದಲೇ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು, ವಿದ್ಯುತ್ : ಸಿದ್ದರಾಮಯ್ಯ ಘೋಷಣೆ

ಬೆಂಗಳೂರು ನ,೧ : ಈಗಿನಿಂದಲೇ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಿ ಸಿದ್ದು  ಮಾತನಾಡಿದರು.

ಕನ್ನಡಿಗರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಶಾಲಿಗಳನ್ನಾಗಿ ಮಾಡುವ ಜತೆಗೆ ಶಿಕ್ಷಣದ ಗುಣಮಟ್ಟ ವೃದ್ಧಿಸಿ, ಕನ್ನಡ ಶಾಲೆಗಳ ಮೂಲಭೂತ ಸವಲತ್ತುಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

ದೇವರಾಜು ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷಗಳು ತುಂಬಿವೆ. ಈ ದಿನ ನಾವೆಲ್ಲಾ  ಕನ್ನಡದಲ್ಲೇ ವ್ಯವಹರಿಸುವ ಪ್ರತಿಜ್ಞೆಯನ್ನು ಮಾಡುವ ಮೂಲಕ ನಮ್ಮ ತಾಯ್ನೆಲದ ಋಣ ತೀರಿಸುವ ಕೆಲಸ ಮಾಡೋಣ ಎಂದು ಕರೆನೀಡಿದರು.

ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ ಹೆಸರಿನಲ್ಲಿ ಇಡೀ ವರ್ಷ ಸ್ವಾಭಿಮಾನಿ ಕನ್ನಡ ಸಾಂಸ್ಕೃತಿಕ ಸಂಭ್ರಮವನ್ನು ಈ ನವೆಂಬರ್ ನಿಂದ 2024 ರ ನವೆಂಬರ್ ವರೆಗೆ   ಆಚರಿಸಲಾಗುವುದು ಎಂದು ಹೇಳಿದರು.

ಹಿಂದಿನ ಬಿಜೆಪಿ ಸರ್ಕಾರ 50 ನೇ ವರ್ಷಕ್ಕೆ ಇದನ್ನು ಆಚರಿಸಬೇಕಿತ್ತು. ಅವರು ಆಚರಿಸಲಿಲ್ಲ. ಹೀಗಾಗಿ 50 ವರ್ಷ ತುಂಬಿದ ಸಂದರ್ಭವನ್ನು ನಾವು ಆಚರಿಸುತ್ತಿದ್ದೇವೆ ಎಂದು ತಿಳಿಸಿದರು

ನಮ್ಮ ನಾಡಿನಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡದ ವಾತಾವರಣವನ್ನು ಸೃಷ್ಟಿಸಬೇಕು, ಸಂಭ್ರಮಿಸಬೇಕು ಎಂದು ಹೇಳಿದರು.

ಕನ್ನಡ ನೆಲದಲ್ಲಿದ್ದೂ ಕನ್ನಡ ಮಾತನಾಡದವರು ಹಲವು ಭಾಗಗಳಲ್ಲಿ ಇದ್ದಾರೆ. ನಮ್ಮ ಆಡಳಿತ ಭಾಷೆ ಕನ್ನಡ. ಆದ್ದರಿಂದ ನಾವು ಕನ್ನಡದಲ್ಲೇ ವ್ಯವಹರಿಸಬೇಕು.

ಪ್ರತಿಯೊಂದು ಭಾಷೆಗೂ ನಾವು ಗೌರವ ಕೊಡಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯವಹರಿಸುವಾಗ, ಆಡಳಿತದಲ್ಲಿ ಕನ್ನಡ ಬಳಕೆ ಆಗಬೇಕು. ಇದನ್ನು ಪ್ರತಿಯೊಬ್ಬ ಅಧಿಕಾರಿಯೂ ಚಾಚೂ ತಪ್ಪದೆ ಪಾಲಿಸಬೇಕು ಎಂದು ಮುಖ್ಯ ಮಂತ್ರಿ ಸೂಚಿಸಿದರು.

ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡದಲ್ಲೂ ಪ್ರವೇಶ ಪರೀಕ್ಷೆ ನಡೆಸಲು ಈ ಹಿಂದೆಯೂ ಒತ್ತಾಯಿಸಿದ್ದೆ. ಅಗತ್ಯಬಿದ್ದರೆ ಮತ್ತೆ ಕೇಂದ್ರಕ್ಕೆ ಪತ್ರ ಬರೆದು ಆಗ್ರಹಿಸುತ್ತೇನೆ ಎಂದು ಹೇಳಿದರು.

ಕನ್ನಡದಲ್ಲಿ ಕಲಿತರೆ ಉದ್ಯೋಗ ಸಿಗುವುದಿಲ್ಲ, ಜ್ಞಾನ ಸಂಪಾದನೆ ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆಯಿಂದ ಕಾನ್ವೆಂಟ್ ವ್ಯಾಮೋಹ ಬೆಳೆಸಿಕೊಂಡಿದ್ದಾರೆ, ಇದು ಸರಿಯಲ್ಲ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡ ಮಾಧ್ಯಮದಲ್ಲಿ ಕಲಿತವರು ಉನ್ನತ ಹುದ್ದೆಗಳಲ್ಲಿ ಇದ್ದಾರೆ,ಅತಿ ಹೆಚ್ಚು ಸಾಧನೆ ಮಾಡಿದ್ದಾರೆ ಎಂದು ಉದಾಹರಣೆ ನೀಡಿದರು.

ತಮ್ಮ ಮಕ್ಕಳನ್ನು ಅವರ ಇಷ್ಟದ ಭಾಷೆಯಲ್ಲಿ ಕಲಿಸುವುದು ಪೋಷಕರ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಮಾತೃಭಾಷೆಯ ಮಾಧ್ಯಮದಲ್ಲೇ ಕಲಿಯುವುದು ಅತ್ಯಂತ ವೈಜ್ಞಾನಿಕ ಎನ್ನುವುದನ್ನು ಮನಗಾಣಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಸಚಿವ ಆರ್.ವಿ.ದೇಶ್ ಪಾಂಡೆ, ಶಾಸಕ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು,ಸರ್ಕಾರದ ಮುಖ್ಯ ಕಾರ್ಯದರ್ಶಿ ‌ವಂದಿತಾ ಶರ್ಮ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.