ದೇಶದಲ್ಲಿ ಕಾರ್ಮಿಕ ವರ್ಗ ಸಂಪತ್ತನ್ನು ಉತ್ಪಾದಿಸಿದರೆ ಉಳಿದವರು ಅನುಭವಿಸುತ್ತಾರೆ -ಸಿದ್ದರಾಮಯ್ಯ

ಬೆಂಗಳೂರು: ದೇಶದಲ್ಲಿ ಕಾರ್ಮಿಕ ವರ್ಗ ಸಂಪತ್ತನ್ನು ಉತ್ಪಾದಿಸಿದರೆ, ಉಳಿದವರು ಅನುಭವಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಕಾರ್ಮಿಕ ಇಲಾಖೆ ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23 ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದಲೇ ಬಸವಣ್ಣನವರು ಕಾಯಕ ಪದ್ಧತಿಯನ್ನು ತಂದರು.

ಸಂವಿಧಾನದ ಪ್ರಕಾರ ಪ್ರತಿಯೊಬ್ಬರೂ ಸಮಾಜದ ಸಂಪತ್ತಿನಲ್ಲಿ ಸಮಪಾಲು ಹೊಂದಬೇಕು. ಹೀಗಾಗಿ ನಾವು ಕಾರ್ಮಿಕರ ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇದರಿಂದ ಸಮ ಸಮಾಜದ ಆಶಯಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಶೂದ್ರ ಮತ್ತು ಇತರೆ ಮಹಿಳೆಯರನ್ನು ಶತ- ಶತಮಾನಗಳ ಕಾಲ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿತ್ತು.

ಈ ಕಾರಣಕ್ಕೇ ಶೂದ್ರ ವರ್ಗಗಳು ಹಿಂದುಳಿಯುವಂತಾಯಿತು. ಅಸಮಾನತೆ ಹೆಚ್ಚಾಯಿತು. ಈ ಅಸಮಾನತೆಯನ್ನು ಅಳಿಸುವ ಉದ್ದೇಶ ನಮ್ಮ ಸರ್ಕಾರದ್ದು ಎಂದು ಸಿಎಂ ತಿಳಿಸಿದರು.

960000 ಮಕ್ಕಳಿಗೆ ಕಲ್ಯಾಣ ನಿಧಿ ಮೂಲಕ ಸಹಾಯಧನ ಬಿಡುಗಡೆ ಆಗುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ಶಿಕ್ಷಣವಂತರಾಗಬೇಕು. ಶಿಕ್ಷಣದಿಂದ ಅಸಮಾನತೆ ದೂರ ಮಾಡಬಹುದು ಎಂದರು.

ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪಟ್ಟಭದ್ರರನ್ನು ನಾವು ದೂರ ಇಡಬೇಕು. ಈ ಪಟ್ಟ ಭದ್ರರು ಸಾಮಾಜಿಕ ನ್ಯಾಯದ ವಿರೋಧಿಗಳು ಎಂದು ‌ಸಿದ್ದರಾಮಯ್ಯ ಹೇಳಿದರು.

ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಿಂದ ನಾವು ಎಲ್ಲಾ ಜಾತಿ-ಧರ್ಮದವರಿಗೆ ಅನುಕೂಲ ಆಗುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.

ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್,  ಸಚಿವರಾದ ಸಂತೋಷ್ ಲಾಡ್, ಕೆ.ಹೆಚ್.ಮುನಿಯಪ್ಪ,ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.