ಬೆಂಗಳೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಗೊಂಡರು.
ಈ ಇಬ್ಬರನ್ನೂ ಕೆಪಿಸಿಸಿ ಕಚೇರಿಯಲ್ಲಿ
ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,ಇವರಿಬ್ಬರೂ ಜೆಡಿಎಸ್ ತೊರೆಯುವ ಮೂಲಕ ಜಾತ್ಯತೀತ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾವಿದ್ದಾಗ ಜನತಾದಳ ಸೆಕ್ಯುಲರ್ ಆಗಿತ್ತು. ಈಗ ಎಸ್ ಹೋಗಿ ಕೇವಲ ಜನತಾದಳ ಆಗಿ ಉಳಿದಿದೆ ಎಂದು ಟೀಕಿಸಿದರು.
ಹಿಂದೆಯೂ ಬಿಜೆಪಿ ಜತೆ ಕೈ ಜೋಡಿಸಿದ್ದ ಕಾರಣಕ್ಕೆ ಜನತಾ ಪರಿವಾರದಲ್ಲಿ ಸೆಕ್ಯುಲರ್ ಸಿದ್ದಾಂತದವರೆಲ್ಲಾ ಪ್ರತ್ಯೇಕವಾಗಿ ಉಳಿದೆವು. ಈಗ ಜೆಡಿಎಸ್ ಮತ್ತೆ ಬಿಜೆಪಿ ಜತೆ ಬೆರೆಯುತ್ತಿದೆ ಎಂದು ಹೇಳಿದರು.
ನಾನು ಜೆಡಿಎಸ್ ಅನ್ನು ಬಿಜೆಪಿಯ “ಬಿ” ಟೀಮ್ ಅಂದಿದ್ದಕ್ಕೆ ಸಿಟ್ಟಾಗಿದ್ದರು. ಅಂದು ನಾನು ಹೇಳಿದ್ದನ್ನು ಇಂದು ಅವರೇ ಸಾಬೀತುಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಜೆಡಿಎಸ್ ಈಗ ತನ್ನ ಸ್ವರೂಪದಲ್ಲಿ ಜನಸಮುದಾಯದ ರಾಜಕೀಯ ಪಕ್ಷ ಆಗಿ ಉಳಿದಿಲ್ಲ. ಕೇವಲ ಕುಟುಂಬದ ಪಕ್ಷವಾಗಿ ಸೀಮಿತವಾಗಿದೆ.
ಜೆಡಿಎಸ್ ನ ಡಬ್ಬಲ್ ಗೇಮ್ ಅರ್ಥ ಮಾಡಿಕೊಂಡಿರುವ ಗೌರಿಶಂಕರ್ ಮತ್ತು ಮಂಜುನಾಥ್ ಜತೆಗೆ ಇನ್ನೂ ಬಹಳ ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಜೀವನವನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ನಾವು ಗ್ಯಾರಂಟಿ ಕಾರ್ಯಕ್ರಮಗಳನ್ನು ಕೊಟ್ಟಾಗ ಅವನ್ನು ಟೀಕಿಸಿದ್ದ ಪ್ರಧಾನಿಗಳು ಈಗ ಮೋದಿ ಗ್ಯಾರಂಟಿ ಎಂಬ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ ನಿಮಗೆ ನಾಚಿಕೆ ಆಗತ್ತೋ ಇಲ್ವೋ ಎಂದು ಸಿಎಂ ಪ್ರಶ್ನಿಸಿದರು.
ರಾಜ್ಯದ, ಕನ್ನಡ ನಾಡಿನ ಜನತೆಯ ಹಣ ಇರುವ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿಯವರು ತಮ್ಮ ಕಾರ್ಯಕ್ರಮ ಎಂದು ಬಿಂಬಿಸಿ ಪ್ರಚಾರ ಪಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು ಸಿದ್ದರಾಮಯ್ಯ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಸೇರಿ ಹಲವು ಮುಖಂಡರು ಪಕ್ಷಕ್ಕೆ ಎಲ್ಲರನ್ನೂ ಸ್ವಾಗತಿಸಿದರು.

