ಯತೀಂದ್ರ ವಿಡಿಯೋ ವೈರಲ್: ರಾಜೀನಾಮೆ ನೀಡುವಂತೆ ಸಿದ್ಧರಾಮಯ್ಯಗೆ ಹೆಚ್.ಡಿಕೆ ಆಗ್ರಹ

ಬೆಂಗಳೂರು: ಮಾಜಿ ಶಾಸಕ ಯತೀಂದ್ರ ಸಿದ‍್ಧರಾಮಯ್ಯ ಅವರು ದೂರವಾಣಿ ಕರೆಯಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವಂತೆ ಸಿಎಂ ಸಿದ್ಧರಾಮಯ್ಯಗೆ ಜೆಡಿಎಸ್‌ ‌ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕಾಸಿಗಾಗಿ ಹುದ್ದೆ ದಂಧೆ ಕರ್ನಾಟಕದಲ್ಲಿ ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ ಎಂದಿದ್ದಾರೆ.

ಕಾಂಗ್ರೆಸ್ ಸರಕಾರದ ವಸೂಲಿ ಬಿಸಿನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ ಎಂದು ಟ್ವೀಟ್ ಮಾಡಿ ‌ಕುಟುಕಿದ್ದಾರೆ.

ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ.

ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ ಎಂದು ದೂರಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, ನಾನು ಹೇಳಿದವರಷ್ಟನ್ನೇ ಮಾಡಿ ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ ಅಥವಾ ಮಿನಿಸ್ಟರ್ ಫಾರ್ ಕ್ಯಾಶ್ ಫಾರ್ ಪೋಸ್ಟಿಂಗಾ ಇಲ್ಲವೇ ಒಳಾಡಳಿತ ಸಚಿವಾಲಯ ಮಾದರಿಯ ಒಳ ವಸೂಲಿ ಸಚಿವಾಲಯದ ಸಚಿವರಾ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರೀ ಆಸಾಮಿ ಯಾರು ಇಷ್ಟಕ್ಕೂ ಆ ಮಹದೇವ ಎಂಬ ವ್ಯಕ್ತಿ ಯಾರು ಹಿಂದೊಮ್ಮೆ ನಾನೇ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೆ.

ಪ್ರತೀ ವರ್ಗಾವಣೆಗೆ ತಲಾ 30 ಲಕ್ಷ ರೂ. ಪೀಕುತ್ತಿದ್ದ ಗಿರಾಕಿ ಈತ ಎಂದು ತಿಳಿಸಿದ್ದೆ. ಕುಮಾರಸ್ವಾಮಿ ಸುಳ್ಳು ಹೇಳ್ತಾ ಇದ್ದಾರೆ,  ಅವರಿಗೆ ನಾನು ಉತ್ತರ ಕೊಡಲ್ಲ, ಅವರು ಹಿಟ್ ಅಂಡ್ ರನ್ ಗಿರಾಕಿ ಎಂದಿದ್ದ ಸಿಎಂ ಸಿದ್ದರಾಮಯ್ಯನವರು ಈಗ ಏನು ಹೇಳುತ್ತಾರೆ? ಎಂದು ಹೆಚ್.ಡಿಕೆ ಚಾಟಿ ಬೀಸಿದ್ದಾರೆ.

ನಾನು ಹೇಳಿದ್ದೆಲ್ಲಾ ಸುಳ್ಳು ಸುಳ್ಳು ಎಂದು ಸಲೀಸಾಗಿ ಹೇಳುತ್ತೀರಲ್ಲ ಸತ್ಯ ಎದ್ದು ಎದುರಿಗೇ ಕೂತಿದೆ. ಏನು ಹೇಳುತ್ತೀರಿ, ವಿಡಿಯೋದಲ್ಲಿರುವ ವಿಷಯ ಸುಳ್ಳೋ, ನಿಜವೋ ನಾಡಿನ ಜನ ತೀರ್ಮಾನ ಮಾಡುತ್ತಾರೆ. ನಿಮ್ಮಿಂದ ಉತ್ತರವಷ್ಟೇ ಅಲ್ಲ, ನಿಮಗೆ ಮಾನ ಮರ್ಯಾದೆ ಬಹಳ ಜಾಸ್ತಿ ಅಲ್ಲವೇ ನೈತಿಕ ಮೌಲ್ಯಗಳಂತೂ ದುಪಟ್ಟು ಜಾಸ್ತಿ, ಅದಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡಿ ಎಂದು ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ನಲ್ಲಿ ಒತ್ತಾಯಿಸಿದ್ದಾರೆ