ಬೆಂಗಳೂರು: ಚೀನಾ ದೇಶದಲ್ಲಿ ಇನ್ ಫ್ಲುಯೆಂಜಾ ತೀವ್ರ ವಾಗಿರುವ ಹಿನ್ನೆಲೆಯಲ್ಲಿ ಭಾರದಲ್ಲೂ ಆತಂಕ ಮನೆಮಾಡಿದೆ.
ಹಾಗಾಗಿ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದೆ.
ಅದಕ್ಕಾಗಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಜನತೆ ಮತ್ತೆ ಮಾಸ್ಕ್ ಧರಿಸುವಂತೆ ಸೂಚಿಸಿದೆ.
ಕೋವಿಡ್ ಸಂದರ್ಭದಲ್ಲಿ ಅನುಸರಿಸುತ್ತಿದ್ದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದೆ.
ಆಗಾಗ ಸಾಬೂನಿನಲ್ಲಿ ಕೈತೊಳೆಯಿರಿ,ಹೊರಗಡೆ ಬಂದಾಗ ಮರೆಯದೆ ಮಾಸ್ಕ್ ಧರಿಸಿ,ಅಂತರ ಕಾಪಾಡಿ ಎಂದು ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸೂಚಿಸಿದೆ.
ಉಸಿರಾಟದ ಕಾಯಿಲೆ ಗಳು ಹರಡದಂತೆ ಅದರ ನಿಯಂತ್ರಣಕ್ಕಾಗಿ ಈಗಿನಿಂದಲೇ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದೆ.
ಕೆಮ್ಮುವಾಗ ಹಾಗೂ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು, ಕಣ್ಣು ಮೂಗು ಅಥವಾ ಬಾಯಿಯನ್ನು ಅನಗತ್ಯವಾಗಿ ಸ್ಪರ್ಶ ಮಾಡಬಾರದು, ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಡೆಗಟ್ಟಿ ಒಂದು ವೇಳೆ ಹೋಗಲೇಬೇಕಾದ ಸಂದರ್ಭ ಬಂದಲ್ಲಿ ಮಾಸ್ಕ್ ಬಳಸಿ ಎಂದು ಸೂಚಿಸಿದೆ.
ಆಗಾಗ ಸಾಬೂನು ಬಳಸಿ ಕೈಗಳನ್ನು ತೊಳೆದುಕೊಳ್ಳಿ ಫ್ಲೂ ಬಂದಿದ್ದ ವ್ಯಕ್ತಿಗಳಿಂದ ಆದಷ್ಟು ಅಂತರವನ್ನು ಕಾಪಾಡಿಕೊಳ್ಳಿ ಎಂದು ಹೇಳಿದೆ.
ಚೆನ್ನಾಗಿ ನಿದ್ರೆ ಮಾಡಿ, ದೈಹಿಕವಾಗಿ ಕಾರ್ಯಶೀಲವಾಗಿರಿ, ಒತ್ತಡವನ್ನು ಸರಿಯಾಗಿ ನಿಭಾಯಿಸಿ ಸಾಕಷ್ಟು ನೀರು ಕುಡಿಯಿರಿ, ಪೌಷ್ಟಿಕ ಆಹಾರವನ್ನು ಸೇವಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ ಮತ್ತು ಇತರೆ ಉಸಿರಾಟದ ಕಾಯಿಲೆಗಳು ಹೆಚ್ಚಾಗಿರುವ ಜಾಗಗಳಿಗೆ ಹೋಗಬೇಡಿ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಒಂದು ವೇಳೆ ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಿ ಮನೆಯಲ್ಲಿ ನೀವೇ ಸ್ವತಃ ಔಷಧಿಗಳನ್ನು ಮಾಡಿಕೊಳ್ಳಬೇಡಿ ಎಂದು ತಿಳಿಸಿದೆ.
ಸ್ಥಳೀಯ ಆರೋಗ್ಯ ಇಲಾಖೆಗಳಿಗೂ ಕೆಲವು ಸೂಚನೆಗಳನ್ನು ನೀಡಿದ್ದು ಎಲ್ಲಾ ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಆದೇಶ ನೀಡಿದ್ದಾರೆ.

