ಅಕ್ರಮಗಳಿಂದ ಪಾರಾಗಲು ಬಿಜೆಪಿಗೆ ಶರಣಾಗಲು ಹೊರಟ ಪವರ್‌ ಫುಲ್‌ ಸಚಿವ-ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್

ಹಾಸನ: ಅಕ್ರಮಗಳಿಂದ ಪಾರಾಗಲು ಬಿಜೆಪಿ ಕೇಂದ್ರ ನಾಯಕರ ಜತೆ ಚೌಕಾಸಿ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ಪ್ರಭಾವೀ ಮಂತ್ರಿಯೊಬ್ಬರು ಐವತ್ತು-ಅರವತ್ತು ಶಾಸಕರನ್ನು ಕರೆದುಕೊಂಡು ಹೋಗಲು ಸಿದ್ಧವಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಾಂಬ್‌ ಸಿಡಿಸಿದ್ದಾರೆ.

ಹಾಸನದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ.ಕೆ,ಕಾಂಗ್ರೆಸ್ ಸರಕಾರದಲ್ಲಿ ಎಲ್ಲವೂ ಸರಿ ಇಲ್ಲ, ಈ ಸರಕಾರ ಯಾವಾಗ ಹೋಗುತ್ತೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಪ್ರಭಾವೀ ಮಂತ್ರಿಯೊಬ್ಬರು ತಮ್ಮ ಮೇಲಿರುವ ಅಕ್ರಮಗಳಿಂದ ಪಾರಾಗಲು ಹರಸಾಹಸ ಮಾಡುತ್ತಿದ್ದಾರೆ, ಕೇಂದ್ರ ಬಿಜೆಪಿ ನಾಯಕರ ಕೈಕಾಲು ಕಟ್ಟುತ್ತಿದ್ದಾರೆ, ಸುಮಾರು ಐವತ್ತು-ಅರವತ್ತು ಶಾಸಕರನ್ನು ಕರೆದುಕೊಂಡು ಬೇಲಿ ಹಾರಲು ತಯಾರಿ ನಡೆಸುತ್ತಿದ್ದಾರೆ ಎಂದು ಯಾರೋ ಮೊನ್ನೆ ನನಗೆ ಮಾಹಿತಿ ನೀಡಿದರು ಎಂದು ಕುಮಾರಸ್ವಾಮಿ ಹೇಳಿದರು.

ಇಷ್ಟಕ್ಕೂ ಅವರು ಯಾರು ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸಣ್ಣಪುಟ್ಟವರು ಹೋಗಲು ಆಗುತ್ತದೆಯೇ, ದೊಡ್ಡವರು, ಅದರಲ್ಲೂ ಪ್ರಭಾವಿಗಳೇ ಈ ಸಾಹಸ ಮಾಡಲು ಸಾಧ್ಯ ಎಂದು ವ್ಯಂಗ್ಯವಾಡಿದರು.

ಅಯ್ಯೋ ದಯವಿಟ್ಟು ನಿಮ್ಮ ಜೊತೆ ಬಂದುಬಿಡ್ತೀನಿ. ಅಲ್ಲಿಯವರೆಗೂ ಐದಾರು ತಿಂಗಳು ರಿಲೀಫ್ ಕೊಡಿ ಅಂತ ಬೇಡಿಕೊಂಡು ಹೋಗಿದ್ದು ಗೊತ್ತು ಎಂದು ಉತ್ತರಿಸಿದರು.

ಮಹಾರಾಷ್ಟ್ರದಲ್ಲಿ ನಡೆದಂತೆ ಇಲ್ಲಿ ಯಾರು ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ. ಈ ದೇಶದಲ್ಲಿ ಇವತ್ತಿನ ರಾಜಕಾರಣದಲ್ಲಿ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಇಲ್ಲಿ ಯಾರಿಗೂ ಪ್ರಮಾಣಿಕತೆ, ನಿಷ್ಠೆ ಅನ್ನುವುದು ಉಳಿದಿಲ್ಲ. ಅವರವರ ಸ್ವಾರ್ಥಕ್ಕೆ ಏನೇನು ಆಗಬೇಕು ಮಾಡಿಕೊಂಡು ಹೋಗುತ್ತಿದ್ದಾರೆ ಅಷ್ಟೇ.

ಇವತ್ತು ಇಲ್ಲಿ ಇರುತ್ತಾರೆ, ಅನುಕೂಲ ಆಗಬೇಕಾದರೆ ಇನ್ನೊಂದು ಕಡೆ ಹೋಗುತ್ತಾರೆ. ಇದು ಇವತ್ತಿನ ರಾಜಕಾರಣ ಎಂದು ಎಚ್‌ಡಿ ಕೆ ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ವಿರುದ್ದ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬರೀ ಹರಿಪ್ರಸಾದ್ ಅಲ್ಲ. ಇನ್ನೂ ಸಾಕಷ್ಟು ಜನ ಇದ್ದಾರೆ. ಒಂದೊಂದೇ ಧ್ವನಿ ಹೊರ ಬರುತ್ತದೆ ಎಂದರು.