ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ಆರ್ಟಿಕಲ್ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ಆದೇಶವನ್ನ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ತೀರ್ಪು ಸೋಮವಾರ ಹೊರ ಬಿದಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಈ ತೀರ್ಪು ನೀಡಿದೆ.
ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠವು 16 ದಿನಗಳಿಂದ ಅರ್ಜಿದಾರರು ಮತ್ತು ಕೇಂದ್ರದ ವಾದಗಳನ್ನು ಆಲಿಸುತ್ತು.
ಸೆಪ್ಟೆಂಬರ್ 5 ರಂದು ಸುಪ್ರೀಂ ಕೋರ್ಟ್ ತೀರ್ಪನ್ನು ಡಿಸೆಂಬರ್ 11 ಕ್ಕೆ ಕಾಯ್ದಿರಿಸಿತ್ತು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರ ನಿರ್ಧಾರ ಸರಿಯಾಗಿದೆ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಅಷ್ಟೇ ಅಲ್ಲದೇ 2024ರ ಸೆಪ್ಟೆಂಬರ್ 30ರ ಒಳಗಡೆ ವಿಧಾನಸಭಾ ಚುನಾವಣೆ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠದಿಂದ ಸರ್ವಾನುಮತದ ತೀರ್ಪು ಪ್ರಕಟವಾಗಿದೆ.
ತೀರ್ಪು ಓದಿದ ಸಿಜೆಐ ಚಂದ್ರಚೂಡ್ ಅವರು, ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ತಾತ್ಕಾಲಿಕ. ಭಾರತದ ಸಂವಿಧಾನದ 1 ಮತ್ತು 370 ನೇ ವಿಧಿಗಳಿಂದ ಸ್ಪಷ್ಟವಾದಂತೆ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ.
ರಾಜ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಆರ್ಟಿಕಲ್ 370 ವಿಧಿಸಿದ್ದು ಮಧ್ಯಂತರ ವ್ಯವಸ್ಥೆಯಾಗಿದೆ. ರಾಷ್ಟ್ರಪತಿಗಳು ರದ್ದು ಪಡಿಸಿದ ಆದೇಶ ಸರಿಯಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

