ಗೃಹ ಇಲಾಖೆ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹರಾಜಾಗುತ್ತಿದೆ -ಅಶೋಕ್ ಟೀಕೆ

ಬೆಂಗಳೂರು: ಈ ಹಿಂದೆ ಡ್ರಗ್ಸ್ ಮಾರಾಟ, ದರೋಡೆ ಮೊದಲಾದ ಪ್ರಕರಣಗಳಲ್ಲಿ ಶಾಮೀಲಾದ ರಾಜ್ಯದ 124 ಪೊಲೀಸರು ಅಮಾನತುಗೊಂಡಿರುವುದು ಇಡೀ ಗೃಹ ಇಲಾಖೆಗೆ ನಾಚಿಕೆಗೇಡಿನ ಸಂಗತಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಗೃಹ ಇಲಾಖೆಯ ಹೊಣೆಯನ್ನು ‌ಸಚಿವ ಪ್ರಿಯಾಂಕ್ ಖರ್ಗೆ ವಹಿಸಿಕೊಂಡ ನಂತರ ಇಲಾಖೆಯ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹರಾಜಾಗುತ್ತಿದೆ ಎಂದು ಟ್ವೀಟ್ ಮಾಡಿ ಅಶೋಕ್‌ ಛೇಡಿಸಿದ್ದಾರೆ.

ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆಗೆ ರಾಜಸ್ತಾನಕ್ಕೆ ತೆರಳಿದ್ದ ಎಚ್ಎಎಲ್ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಲಂಚ ಪಡೆಯುವಾಗ ಅಲ್ಲಿನ ಎಸಿಬಿ‌ಗೆ ಸಿಕ್ಕಿಬಿದ್ದಿದ್ದಾರೆ.

ಆರ್ ಎಸ್ಎಸ್ ಗೆ ನಿಯಂತ್ರಣ ಹೇರಲು, ಧರ್ಮಸ್ಥಳದ ಬುರುಡೆ ಪ್ರಕರಣದ ಬಗ್ಗೆ ಚರ್ಚೆ ನಡೆಸುವ ಬದಲು, ಪೊಲೀಸ್ ಇಲಾಖೆಯಲ್ಲಿ ಶಿಸ್ತು ತರಲು ಸಭೆ ನಡೆಸಿದ್ದರೆ ರಾಜ್ಯದ ಕಾನೂನು ವ್ಯವಸ್ಥೆ ಈ ರೀತಿ ನಗೆಪಾಟಲಿಗೀಡಾಗುತ್ತಿರಲಿಲ್ಲ ಎಂದು ಅಶೋಕ‌ ಲೇವಡಿ ಮಾಡಿದ್ದಾರೆ.

10 ರೂಪಾಯಿ ಲಂಚ‌ ಕೇಳಿದರೂ ಕರೆ ಮಾಡಿ ಎನ್ನುವ ಸಿಎಂ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಸರ್ಕಾರದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಜನರು ದೂರುಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ನೀವೇ ಹೇಳಿ ಎಂದು ‌ಪ್ರತಿಪಕ್ಷ ನಾಯಕ ಕಾಲೆಳೆದಿದ್ದಾರೆ.